ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸಾವಿನ ಪ್ರಕರಣದ ಜೊತೆಗೆ ಅಕ್ರಮ ಹಣಕಾಸಿನ ವ್ಯವಹಾರ ವಿಚಾರ ತಳುಕು ಹಾಕಿಕೊಳ್ಳುತ್ತಿದ್ದಂತೆ ಬಿಹಾರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸುಶಾಂತ್ ತಂದೆ ಕೆ.ಕೆ.ಸಿಂಗ್ ದೂರಿನ ಮೇರೆಗೆ ಇಂದು ಮುಂಬೈಗೆ ಆಗಮಿಸಿದ್ದ ಬಿಹಾರ ಪೊಲೀಸರು ನಿರ್ದೇಶಕ ರೂಮಿ ಜೆಫ್ರಿ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಇದೇ ವೇಳೆ ಬಾಂದ್ರಾ ಪೊಲೀಸ್ ಠಾಣೆಗೂ ಭೇಟಿ ನೀಡಿದ್ದ ತನಿಖಾಧಿಕಾರಿಗಳು ಮಾಹಿತಿ ಪಡೆದಿದ್ದಾರೆ.
ಸುಶಾಂತ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಅವರನ್ನು ತನಿಖೆಗೆ ಒಳಪಡಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇನ್ಸ್‌ಪೆಕ್ಟರ್ ಆಲಂ, ಸದ್ಯಕ್ಕೆ ರಿಯಾ ಅವರನ್ನು ತನಿಖೆಗೊಳಪಡಿಸುವ ಅವಶ್ಯಕತೆ ಇಲ್ಲ. ಆಕೆಯ ಮೇಲೆ ನಿಗಾವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದೆಡೆ, ಸಿಬಿಐ ತನಿಖೆ ಸಂಬಂಧ ಮಾಹಿತಿ ನೀಡಿದ ಬಿಹಾರ ಡಿಜಿಪಿ ಗುಪ್ತೇಶ್ವರ್ ಪಾಂಡೆ, ತನಿಖೆ ನಡೆಸಲು ಬಿಹಾರ ಪೊಲೀಸರು ಶಕ್ತರಿದ್ದಾರೆ. ನಾವು ಸಿಬಿಐಗೆ ತನಿಖೆಗೆ ಒತ್ತಾಯಿಸುವುದಿಲ್ಲ. ಸುಶಾಂತ್ ತಂದೆ ಬೇಕಿದ್ದರೆ ಸಿಬಿಐಗೆ ತನಿಖೆಗೆ ಒತ್ತಾಯಿಸಲಿ ಎಂದಿದ್ದಾರೆ.