ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಮನೆಯಿಂದ ಕೆಲಸ ಮಾಡುವವರು (ವರ್ಕ್ ಫ್ರಮ್ ಹೋಂ) ಮನೆಯಿಂದ ಕೆಲಸ ಮಾಡಲು ಸಾಧ್ಯವಾಗದವರ ಅನಿವಾರ್ಯತೆಯ ದುರ್ಲಾಭ ಪಡೆಯುತ್ತಾರೆ ಮತ್ತು ಅವರು ವಾಸ್ತವದಿಂದ ದೂರವಾಗಿರುತ್ತಾರೆ ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹೇಳಿದ್ದಾರೆ. ಬುಧವಾರ ತಡರಾತ್ರಿ ಕಂಪನಿಯ 3ನೇ ತ್ರೈಮಾಸಿಕದ ಆದಾಯ ವರದಿ ಪ್ರಕಟಿಸಿ ಅವರು ಮಾತನಾಡಿದರು.
ವರ್ಕ್ ಪ್ರಮ್ ಹೋಂ ಬಗ್ಗೆ ಅಭಿಪ್ರಾಯ ಏನು ಎಂದು ಕೇಳಿದ್ದಕ್ಕೆ ಮಸ್ಕ್, "ನಾನು ಅದೆಷ್ಟೋ ಬಾರಿ ಕಾರ್ಖಾನೆಯಲ್ಲಿ ಮಲಗುವ ಅನಿವಾರ್ಯತೆ ಏನಿತ್ತು? ವಾಸ್ತವದಲ್ಲಿ ಹಾಗೆ ಮಾಡುವುದು ಅಗತ್ಯವಾಗಿತ್ತು. ಕಾರ್ಖಾನೆಗೆ ಬಂದು ಕಾರುಗಳನ್ನು ತಯಾರಿಸಬೇಕಾದ ಉದ್ಯೋಗಿಗಳ ಕತೆ ಏನು? ರೆಸ್ಟಾರೆಂಟ್ ಗೆ ಹೋಗಿ ನಿಮಗೆ ಬೇಕಾದ ಆಹಾರ ತಯಾರಿಸುವವರು ಮತ್ತು ಅದನ್ನು ನಿಮಗೆ ತಲುಪಿಸುವವರ ಬಗ್ಗೆ ಯೋಚಿಸಿದ್ದೀರಾ?" ಎಂದು ಪ್ರಶ್ನಿಸಿದರು. ವರ್ಕ್ ಫ್ರಮ್ ಹೋಂ ಮಾದರಿಯು ಅನೈತಿಕ ಎಂದು ಈ ಹಿಂದೆ ಅವರು ಹೇಳಿದ್ದರು.
"ನಿಜವಾಗಿಯೂ ನೀವು ಮನೆಯಿಂದ ಕೆಲಸ ಮಾಡಲು ಬಯಸುವಿರಾ? ಹಾಗಾದರೆ ಕಾರ್ಖಾನೆಯಲ್ಲಿ ನಿಮಗಾಗಿ ಕಾರು ತಯಾರಿಸುವವರು ಕೂಡ ನಿಮ್ಮಂತೆ ವರ್ಕ್ ಫ್ರಮ್ ಹೋಮ್ ಮಾಡಲಿ ಎಂದು ಬಯಸುವಿರಾ? ನಿಮಗಾಗಿ ಆಹಾರ ತಯಾರಿಸುವವರು ಮತ್ತು ಅದನ್ನು ನಿಮ್ಮಲ್ಲಿಗೆ ತಲುಪಿಸುವವರು ಮನೆಯಿಂದ ಹೇಗೆ ಕೆಲಸ ಮಾಡಲು ಸಾಧ್ಯ? ನಿಮ್ಮ ಮನೆಗಳನ್ನು ಕಟ್ಟುವ ಜನ ತಮ್ಮ ಮನೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದ ಮೇಲೆ ನೀವು ಮಾತ್ರ ಹೇಗೆ ಮನೆಯಿಂದ ಕೆಲಸ ಮಾಡುವಿರಿ? ನೈತಿಕವಾಗಿ ಇದೆಷ್ಟು ಸರಿ? ಈ ವಿಷಯ ಗೊಂದಲಮಯವಾಗಿದೆ" ಎಂದು ಮಸ್ಕ್ ಹೇಳಿದರು.
"ಇದು ಕೇವಲ ಉತ್ಪಾದಕತೆಯ ವಿಷಯವಲ್ಲ. ಇದು ನೈತಿಕವಾಗಿ ತಪ್ಪು ಎಂದು ನಾನು ಭಾವಿಸುತ್ತೇನೆ." ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಿಲಿಕಾನ್ ವ್ಯಾಲಿಯ ಲ್ಯಾಪ್ಟಾಪ್ ಕ್ಲಾಸ್ನ ಜನ ತಮ್ಮ ವರ್ಕ್ ಫ್ರಮ್ ಹೋಂ ಬಗೆಗಿನ ಹುಸಿ ನೈತಿಕ ಬೋಧನೆಯನ್ನು ಬಿಟ್ಟುಬಿಡಲಿ ಎಂದು ಮಸ್ಕ್ ಈ ಹಿಂದೆ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದು ಗಮನಾರ್ಹ.
ವರ್ಕ್ ಫ್ರಮ್ ಹೋಂ ಕೊನೆಗೊಳಿಸಿದ ಟಿಸಿಎಸ್: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ತನ್ನ ಬಹುತೇಕ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ನೀಡಿದ್ದ ಅನುಮತಿಯನ್ನು ವಾಪಸ್ ಪಡೆದಿದೆ. ವಾರದಲ್ಲಿ ಐದು ದಿನ ಕಚೇರಿಗೆ ಬರುವುದು ಕಡ್ಡಾಯವಾಗಿದೆ ಎಂದು ಕಂಪನಿ ಹೇಳಿದೆ. ಅಲ್ಲದೇ ಕಚೇರಿಯಲ್ಲಿ ಕೆಲಸ ಮಾಡುವಾಗ ಕಂಪನಿಯ ಡ್ರೆಸ್ ಕೋಡ್ ಪಾಲಿಸುವುದನ್ನು ಕೂಡ ಕಂಪನಿ ಕಡ್ಡಾಯಗೊಳಿಸಿದೆ.
ಇದನ್ನೂ ಓದಿ : ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆ ಕುಸಿತ; ಮಾರಾಟದಲ್ಲಿ ಅಗ್ರಸ್ಥಾನ ಉಳಿಸಿಕೊಂಡ ಸ್ಯಾಮ್ಸಂಗ್