ನವದೆಹಲಿ: ದೇಶದ ನಾಲ್ಕನೇ ಅತಿದೊಡ್ಡ ಸಾಫ್ಟ್ವೇರ್ ಕಂಪನಿ ವಿಪ್ರೋ ಲಿಮಿಟೆಡ್ ತನ್ನ ಉದ್ಯೋಗಿಗಳಿಗೆ ನವೆಂಬರ್ 15ರಿಂದ ಜಾರಿಗೆ ಬರುವಂತೆ ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ. "ವೈಯಕ್ತಿಕ ಸಹಯೋಗ ಮತ್ತು ನಾವೀನ್ಯತೆಯ ಅಪಾರ ಪ್ರಯೋಜನಗಳನ್ನು ಗಮನದಲ್ಲಿಟ್ಟುಕೊಂಡು ನಾವು ಈಗ ನಮ್ಮ ಕೆಲಸದ ಸ್ಥಳದ ನೀತಿಯ ಬಗ್ಗೆ ಮುಂದಿನ ಹೆಜ್ಜೆ ಇಡುತ್ತಿದ್ದೇವೆ ಮತ್ತು ಎಲ್ಲಾ ಉದ್ಯೋಗಿಗಳು ವಾರದಲ್ಲಿ ಮೂರು ದಿನ ಕಚೇರಿಯಿಂದ ಕೆಲಸ ಮಾಡುವುದು ಕಡ್ಡಾಯ ಮಾಡಲಾಗುತ್ತಿದೆ. ಇದು 15 ನವೆಂಬರ್ 2023 ರಿಂದ ಜಾರಿಗೆ ಬರಲಿದೆ" ಎಂದು ಕಂಪನಿ ಸೋಮವಾರ ಹೇಳಿದೆ.
ಸುಮಾರು 55% ಉದ್ಯೋಗಿಗಳು ಈಗಾಗಲೇ ವಾರಕ್ಕೆ ಮೂರು ಬಾರಿ ಕಚೇರಿಗೆ ಬರುತ್ತಿದ್ದಾರೆ ಎಂದು ಅದು ಹೇಳಿದೆ. "ನಮ್ಮ ಪ್ರತಿಭೆಗಳ ವೃತ್ತಿಪರ ಅಭಿವೃದ್ಧಿಗೆ ಮತ್ತು ಗ್ರಾಹಕರಿಗೆ ನಾವೀನ್ಯತೆ ನೀಡುವ ನಿಟ್ಟಿನಲ್ಲಿ ವೈಯಕ್ತಿಕ ಸಂವಹನಗಳು ಬಹಳ ಅಗತ್ಯವಾಗಿವೆ ಎಂಬುದು ನಮ್ಮ ಅಭಿಪ್ರಾಯವಾಗಿದೆ" ಎಂದು ವಿಪ್ರೊ ತಿಳಿಸಿದೆ.
ದೇಶದ ಮತ್ತೊಂದು ಪ್ರಖ್ಯಾತ ಸಾಫ್ಟ್ವೇರ್ ಕಂಪನಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ವಾರಕ್ಕೆ ಐದು ದಿನ ಕಚೇರಿಗೆ ಬಂದು ಕೆಲಸ ಮಾಡುವಂತೆ ತನ್ನ ಕೆಲ ಉದ್ಯೋಗಿಗಳಿಗೆ ಸೂಚಿಸಿತ್ತು.
ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಜಾರಿಗೆ ಬಂದ ಮನೆಯಿಂದ ಕೆಲಸ ಮಾಡುವ ಮಾದರಿಯು ಪರಿವರ್ತನೆಯಾಗಬೇಕಿದೆ ಎಂಬ ವಿಚಾರದಲ್ಲಿ ಕಂಪನಿಗಳಲ್ಲಿ ಒಮ್ಮತ ಹೆಚ್ಚುತ್ತಿದೆ. ಸಾಫ್ಟ್ವೇರ್ ವಲಯದಲ್ಲಿ ವಹಿವಾಟು ಮಂದಗತಿಯಲ್ಲಿ ಸಾಗುತ್ತಿರುವ ಮಧ್ಯೆ ಸಿಬ್ಬಂದಿಯು ಒಂದು ತಂಡವಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಮತ್ತು ಗ್ರಾಹಕರ ಗೌಪ್ಯತೆಯಂತಹ ಸೂಕ್ಷ್ಮ ವಿಷಯಗಳ ಮೇಲೆ ಬಿಗಿಯಾದ ನಿಯಂತ್ರಣ ಕಾಪಾಡಿಕೊಳ್ಳಲು ಒತ್ತು ನೀಡಲಾಗುತ್ತಿದೆ. ಸಾಮಾನ್ಯವಾಗಿ ಕಚೇರಿಯ ಹೊರಗಿನ ಪ್ರದೇಶದಲ್ಲಿ ಕೆಲಸ ಮಾಡುವುದರಿಂದ ಕಂಪನಿಯ ಗೌಪ್ಯ ವಿಷಯಗಳನ್ನು ಗೌಪ್ಯವಾಗಿ ಕಾಪಾಡುವುದು ಕಂಪನಿಗಳಿಗೆ ಒಂದು ಸವಾಲಾಗಿದೆ.
ಕಳೆದ ಎರಡು ವರ್ಷಗಳಿಂದ ರಿಮೋಟ್ ಕೆಲಸದ ಜೀವನಶೈಲಿಗೆ ಒಗ್ಗಿಕೊಂಡಿರುವ ಉದ್ಯೋಗಿಗಳು ಕಚೇರಿಗೆ ಬರಬೇಕೆಂದು ಸೂಚಿಸುತ್ತಿರುವ ಐಟಿ ಸಂಸ್ಥೆಗಳ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಉದ್ಯೋಗಿಗಳ ಸಂಖ್ಯೆಯನ್ನು ನೋಡಿದರೆ ಪ್ರಮುಖ ಐಟಿ ಕಂಪನಿಗಳಲ್ಲಿನ ಅಟ್ರಿಷನ್ ದರಗಳು ಈಗ ಬಹುತೇಕ ಒಂದೇ ಆಗಿವೆ. ಕೆಲಸ ಬಿಟ್ಟು ಹೋಗುವವರ ಪ್ರಮಾಣವನ್ನು ಅಟ್ರಿಷನ್ ರೇಟ್ ಎಂದು ಕರೆಯಲಾಗುತ್ತದೆ. ಎರಡನೇ ತ್ರೈಮಾಸಿಕದ ಕೊನೆಯಲ್ಲಿ ಟಿಸಿಎಸ್, ಇನ್ಫೋಸಿಸ್, ಎಚ್ಸಿಎಲ್ ಮತ್ತು ವಿಪ್ರೋ ಕ್ರಮವಾಗಿ 14.9%, 14.6%, 15.5% ಮತ್ತು 14.2% ನಷ್ಟು ಅಟ್ರಿಷನ್ ರೇಟ್ ಹೊಂದಿವೆ.
ಇದನ್ನೂ ಓದಿ: ಹೊಸ ಚಾಟ್ಬಾಟ್ GPT-4 Turbo ಬಿಡುಗಡೆ; 100 ಮಿಲಿಯನ್ ದಾಟಿದ ಚಾಟ್ಜಿಪಿಟಿ ಬಳಕೆದಾರರ ಸಂಖ್ಯೆ