ನವದೆಹಲಿ: ಹಳೆಯ ನಿರ್ದಿಷ್ಟ ಆ್ಯಂಡ್ರಾಯ್ಡ್ ಆವೃತ್ತಿಯನ್ನು ಹೊಂದಿರುವ ಫೋನ್ಗಳಲ್ಲಿ ವಾಟ್ಸ್‌ಆ್ಯಪ್ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಕಂಪನಿ ಹೇಳಿದೆ. ಆ್ಯಂಡ್ರಾಯ್ಡ್ 4.4 ಅಥವಾ ಕಿಟ್ಕ್ಯಾಟ್ ವರ್ಷನ್ನ ಫೋನ್ಗಳಲ್ಲಿ ವಾಟ್ಸ್‌ಆ್ಯಪ್ ಇನ್ನು ಮುಂದೆ ವರ್ಕ್ ಆಗುತ್ತಿಲ್ಲ. ಅಂಕಿ ಅಂಶಗಳ ಪ್ರಕಾರ ಈಗಲೂ ಕೆಲ ಬಳಕೆದಾರರು ಆ್ಯಂಡ್ರಾಯ್ಡ್ ಕಿಟ್ ಕ್ಯಾಟ್ ವರ್ಷನ್ ಬಳಸುತ್ತಿದ್ದು, ಇವರೆಲ್ಲ ಹೊಸ ವರ್ಷನ್ಗೆ ಅಪ್ಡೇಟ್ ಆಗುವುದು ಅಗತ್ಯ. ಅಂದರೆ ಇವರೆಲ್ಲ ಹೊಸ ಸ್ಮಾರ್ಟ್ಫೋನ್ ಖರೀದಿ ಮಾಡಬೇಕಾಗುತ್ತದೆ.
ಇತ್ತೀಚಿನ ಅಪ್ಡೇಟ್ ಪ್ರಕಾರ, ವಾಟ್ಸ್‌ಆ್ಯಪ್ ಕೇವಲ ಆ್ಯಂಡ್ರಾಯ್ಡ್ (ಲಾಲಿಪಾಪ್ ಎಂದು ಕರೆಯಲಾಗುತ್ತದೆ) 5.0 ಅಥವಾ ಅದಕ್ಕೂ ಮುಂದಿನ ವರ್ಷನ್ಗಳಲ್ಲಿ ಮಾತ್ರ ಕೆಲಸ ಮಾಡುತ್ತದೆ. ಆ್ಯಂಡ್ರಾಯ್ಡ್ ಕಿಟ್ಕ್ಯಾಟ್ ಸೆಪ್ಟೆಂಬರ್ 2013ರಲ್ಲಿ ಬಿಡುಗಡೆಯಾಗಿತ್ತು. ಅಂದರೆ ಈ ವರ್ಷನ್ನ ಆ್ಯಂಡ್ರಾಯ್ಡ್ ಪೋನ್ ಬಳಸುತ್ತಿರುವ ಗ್ರಾಹಕರು ಸರಿಸುಮಾರು 10 ವರ್ಷಗಳಿಂದ ಇದೇ ಫೋನ್ನಲ್ಲಿ ವಾಟ್ಸ್ ಆ್ಯಪ್ ಬಳಸುತ್ತಿದ್ದಾರೆ.
ಈಗ ವಾಟ್ಸ್‌ಆ್ಯಪ್ ಆಂಡ್ರಾಯ್ಡ್ 4.4 ಗೆ ಬೆಂಬಲ ನೀಡುವುದನ್ನು ನಿಲ್ಲಿಸಿದ್ದು, ಈ ಹಳೆಯ ಆವೃತ್ತಿಯಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್ಫೋನ್ಗಳನ್ನು ಹೊಂದಿರುವ ಬಳಕೆದಾರರು ತಯಾರಕರಿಂದ ಸಾಫ್ಟ್ವೇರ್ ನವೀಕರಣ ಲಭ್ಯವಿದ್ದರೆ ತಮ್ಮ ಸ್ಮಾರ್ಟ್ಫೋನ್ಗಳನ್ನು ಆಂಡ್ರಾಯ್ಡ್ 5.0 ಗೆ ನವೀಕರಿಸಬೇಕಾಗುತ್ತದೆ. ಹೊಸ ಆಂಡ್ರಾಯ್ಡ್ ಆವೃತ್ತಿಯ ಅಪ್ಡೇಟ್ ಲಭ್ಯವಿಲ್ಲದಿದ್ದರೆ ಬಳಕೆದಾರರು ಹೊಸ ಸ್ಮಾರ್ಟ್ಫೋನ್ ಕೊಳ್ಳುವುದು ಅನಿವಾರ್ಯ.
ಈಗ ವಾಟ್ಸ್‌ಆ್ಯಪ್ ಬೆಂಬಲಿಸುವ ಅತ್ಯಂತ ಕನಿಷ್ಠ ಆವೃತ್ತಿಯಾಗಿರುವ ಆಂಡ್ರಾಯ್ಡ್ 5.0 ಇಲ್ಲದಿದ್ದರೆ ವಾಟ್ಸ್ಆ್ಯಪ್ನ ಯಾವ ಹೊಸ ಅಪ್ಡೇಟ್ಗಳೂ ನಿಮಗೆ ಸಿಗುವುದಿಲ್ಲ. ಅಂದರೆ ವಾಟ್ಸ್‌ಆ್ಯಪ್ ಆಗಾಗ ಬಿಡುಗಡೆ ಮಾಡುವ ಯಾವುದೇ ಹೊಸ ವೈಶಿಷ್ಟ್ಯಗಳನ್ನು ಬಳಸುವುದು ನಿಮಗೆ ಸಾಧ್ಯವಾಗುವುದಿಲ್ಲ.
ಆ್ಯಂಡ್ರಾಯ್ಡ್ ಇದು ಲಿನಕ್ಸ್ ಆಧಾರಿತ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಸ್ಮಾರ್ಟ್ಫೋನ್ಗಳು ಮತ್ತು ಟ್ಯಾಬ್ಲೆಟ್ಗಳಲ್ಲಿ ಇದನ್ನು ಬಳಸಲಾಗುತ್ತದೆ. ಆ್ಯಂಡ್ರಾಯ್ಡ್ ಪ್ಲಾಟ್ ಫಾರ್ಮ್ ಲಿನಕ್ಸ್ ಕೆರ್ನಲ್, ಜಿಯುಐ, ವೆಬ್ ಬ್ರೌಸರ್ ಮತ್ತು ಡೌನ್‌ಲೋಡ್ ಮಾಡಬಹುದಾದ ಅಂತಿಮ-ಬಳಕೆದಾರ ಅಪ್ಲಿಕೇಶನ್ ಗಳನ್ನು ಆಧರಿಸಿದ ಆಪರೇಟಿಂಗ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇದನ್ನು ಗೂಗಲ್ ಮತ್ತು ನಂತರ ಒಎಚ್ಎ (ಓಪನ್ ಹ್ಯಾಂಡ್ಸೆಟ್ ಅಲೈಯನ್ಸ್) ಅಭಿವೃದ್ಧಿಪಡಿಸಿವೆ. ಇತರ ಕೋಡಿಂಗ್ ಲ್ಯಾಂಗ್ವೇಜ್ ಬಳಸಬಹುದಾದರೂ ಆ್ಯಂಡ್ರಾಯ್ಡ್ ಕೋಡ್ ಬರೆಯಲು ಜಾವಾ ಭಾಷೆಯನ್ನು ಮುಖ್ಯವಾಗಿ ಬಳಸಲಾಗುತ್ತದೆ.
ಇದನ್ನೂ ಓದಿ: ಅಕ್ಟೋಬರ್ 29ರಂದು ಭಾಗಶಃ ಚಂದ್ರಗ್ರಹಣ; ಇಲ್ಲಿದೆ ಸಂಪೂರ್ಣ ಮಾಹಿತಿ