ನವದೆಹಲಿ : ಆಂಡ್ರಾಯ್ಡ್ ಸಾಧನಗಳಲ್ಲಿ ವಾಟ್ಸ್ಆ್ಯಪ್ ಚಾಟ್ ಬ್ಯಾಕಪ್ ಇನ್ನು ಮುಂದೆ ಉಚಿತವಾಗಿರಲ್ಲ ಹಾಗೂ ಬ್ಯಾಕಪ್ಗಳು ಗೂಗಲ್ ಡ್ರೈವ್ನ ಕ್ಲೌಡ್ ಮೆಮೊರಿಯನ್ನು ಆಕ್ರಮಿಸಲಿವೆ. ವಾಟ್ಸ್ಆ್ಯಪ್ ಬ್ಯಾಕಪ್ ಉಚಿತವಾಗಿರಲ್ಲ ಎಂದು ಈ ಹಿಂದೆ ನವೆಂಬರ್ನಲ್ಲಿ ಗೂಗಲ್ ಮತ್ತು ವಾಟ್ಸ್ಆ್ಯಪ್ ಘೋಷಿಸಿದ್ದವು. ಈಗ ಅದಕ್ಕೆ ಪೂರಕವಾಗಿ ವಾಟ್ಸ್ಆ್ಯಪ್ ನಿಧಾನವಾಗಿ ಫ್ರೀ ಬ್ಯಾಕಪ್ ಅನ್ನು ಅಂತ್ಯಗೊಳಿಸುತ್ತಿದೆ. ಬ್ಯಾಕಪ್ ಉಚಿತವಾಗಿರಲ್ಲ ಎಂಬುದರ ಅರ್ಥವೇನು ಎಂಬುದು ನಿಮಗೆ ತಿಳಿಯದಿದ್ದರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಮಾಹಿತಿ.
ಸಾಮಾನ್ಯವಾಗಿ ವಾಟ್ಸ್ಆ್ಯಪ್ ಇನ್ಸ್ಟಾಲ್ ಮಾಡಿದಾಗ ಅದು ನೀವು ನೀಡುವ ಜಿಮೇಲ್ ಖಾತೆಯೊಂದಿಗೆ ಲಿಂಕ್ ಆಗಿರುತ್ತದೆ. ಈಗಿರುವಂತೆ ಪ್ರತಿ ಜಿಮೇಲ್ ಖಾತೆಯಲ್ಲಿ 15 ಜಿಬಿ ವರೆಗೆ ನೀವು ಇಮೇಲ್ಗಳು, ಫೋಟೊಗಳು ಮತ್ತು ಇನ್ನಿತರ ಕಂಟೆಂಟ್ ಅನ್ನು ಸಂಗ್ರಹಿಸಿ ಇಡಬಹುದು. 15 ಜಿಬಿ ಮುಗಿಯುತ್ತಿದ್ದಂತೆಯೇ ಈ ಬಗ್ಗೆ ಜಿಮೇಲ್ ನಿಮಗೆ ಎಚ್ಚರಿಕೆ ನೀಡುತ್ತದೆ. ಇಂಥ ಸಂದರ್ಭದಲ್ಲಿ ಮೇಲ್, ಪೋಟೊ ಹಾಗೂ ಇನ್ನಿತರ ಮಾಹಿತಿಯನ್ನು ಶಾಶ್ವತವಾಗಿ ಡಿಲೀಟ್ ಮಾಡುವ ಮೂಲಕ ಮತ್ತೆ ಜಿಮೇಲ್ ಮೆಮೊರಿಯನ್ನು ನೀವು ಖಾಲಿ ಮಾಡಬಹುದು.
ಇನ್ನು ವಾಟ್ಸ್ಆ್ಯಪ್ ಚಾಟ್ಗಳು ಸಹ ನಿಮ್ಮ ಜಿಮೇಲ್ ಖಾತೆಯೊಂದಿಗೇ ಬ್ಯಾಕಪ್ಗಳು ಆಗುತ್ತಿದ್ದವು. ಆದರೆ ಇವು ಆ 15 ಜಿಬಿಯನ್ನು ಹೊರತುಪಡಿಸಿ ಗೂಗಲ್ ಡ್ರೈವ್ನಲ್ಲಿ ಸೇವ್ ಆಗುತ್ತಿದ್ದವು. ಆದರೆ ಇನ್ನು ಮುಂದೆ ನಿಮ್ಮ ಜಿಮೇಲ್ ಖಾತೆಯ ಮೂಲ 15 ಜಿಬಿ ಸ್ಟೋರೇಜ್ನಲ್ಲಿಯೇ ವಾಟ್ಸ್ಆ್ಯಪ್ ಚಾಟ್ಗಳು ಸಹ ಬ್ಯಾಕಪ್ ಆಗಲಿವೆ. ಅಂದರೆ ಜಿಮೇಲ್ ಡ್ರೈವ್ ಖಾಲಿ ಇಲ್ಲದಿದ್ದರೆ ವಾಟ್ಸ್ಆ್ಯಪ್ ಚಾಟ್ಗಳನ್ನು ಬ್ಯಾಕಪ್ ಮಾಡಲಾಗದು ಎಂದರ್ಥ.
ಇನ್ನು ವಾಟ್ಸ್ಆ್ಯಪ್ ಬ್ಯಾಕಪ್ ಏಕೆ ಬೇಕು ಎಂಬ ಪ್ರಶ್ನೆ ಬರುತ್ತದೆ. ನೀವು ನಿಮ್ಮ ಫೋನ್ ಅನ್ನು ಬದಲಾಯಿಸಿ, ಹೊಸ ಫೋನ್ಗೆ ವಾಟ್ಸ್ಆ್ಯಪ್ ಲಾಗಿನ್ ಮಾಡುವ ಸಮಯದಲ್ಲಿ ಇದು ಮುಖ್ಯವಾಗುತ್ತದೆ. ಹಳೆಯ ಫೋನ್ನಲ್ಲಿನ ವಾಟ್ಸ್ಆ್ಯಪ್ ಜಿಮೇಲ್ಗೆ ಲಿಂಕ್ ಆಗಿದ್ದು, ಆ ಜಿಮೇಲ್ಗೆ ನೀವು ನಿಮ್ಮ ಸಂಪೂರ್ಣ ವಾಟ್ಸ್ಆ್ಯಪ್ ಚಾಟ್ಗಳನ್ನು ಬ್ಯಾಕಪ್ ಮಾಡಿರಬೇಕು. ನಂತರ ಹೊಸ ಫೋನ್ನಲ್ಲಿ ವಾಟ್ಸ್ಆ್ಯಪ್ ಇನ್ಸ್ಟಾಲ್ ಮಾಡಿದ ತಕ್ಷಣ ಅದೇ ಜಿಮೇಲ್ ಅನ್ನು ಲಿಂಕ್ ಮಾಡಿದಾಗ ಮಾತ್ರ ಆ ಎಲ್ಲ ಚಾಟ್ಗಳು ಹೊಸ ಫೋನಿಗೆ ವರ್ಗಾಯಿಸಲ್ಪಡುತ್ತವೆ.
ಈ ಪ್ರಕ್ರಿಯೆಯಲ್ಲಿ ಇಷ್ಟು ದಿನ ಜಿಮೇಲ್ನ ಸ್ಟೊರೇಜ್ ಸ್ಪೇಸ್ ಹೊರತುಪಡಿಸಿ ವಾಟ್ಸ್ಆ್ಯಪ್ ಬ್ಯಾಕಪ್ ಆಗುತ್ತಿತ್ತು. ಆದರೆ ಇನ್ನು ಮುಂದೆ ಹಾಗಾಗುವುದಿಲ್ಲ. ಆ ಎಲ್ಲ ಬ್ಯಾಕಪ್ಗಳು ಜಿಮೇಲ್ ಖಾತೆಯ 15 ಜಿಬಿ ಸ್ಥಳಾವಕಾಶದಲ್ಲಿಯೇ ಜಾಗ ಆಕ್ರಮಿಸಲಿವೆ.
ಇದನ್ನೂ ಓದಿ : 3 ದಶಲಕ್ಷ ಎಲೆಕ್ಟ್ರಿಕ್ ವಾಹನ ಮಾರಿದ ಬಿವೈಡಿ; ಟೆಸ್ಲಾ ಹಿಂದಿಕ್ಕಿದ ಚೀನಾ ಕಂಪನಿ