ಸ್ಯಾನ್ ಫ್ರಾನ್ಸಿಸ್ಕೋ : ಕಳೆದ ತಿಂಗಳು ಹಠಾತ್ತನೆ ವಜಾಗೊಂಡ ಬಳಿಕ ಓಪನ್ ಎಐ ಸಿಇಒ ಆಗಿ ಮರುನೇಮಕಗೊಂಡ ಘಟನೆಯ ದಿನದಂದು ತಾವು ಅನುಭವಿಸಿದ ಮಾನಸಿಕ ತುಮುಲದ ಬಗ್ಗೆ ಸ್ಯಾಮ್ ಆಲ್ಟ್ ಮ್ಯಾನ್ ಮಾತನಾಡಿದ್ದಾರೆ. ಅಂದಿನ ಬೆಳವಣಿಗೆಯು ತನಗೆ ತೀರಾ ಗೊಂದಲ ಮೂಡಿಸಿತ್ತು ಮತ್ತು ಏನೂ ತಿಳಿಯದಂತಾಗಿತ್ತು ಎಂದು ಅವರು ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಆ ಸಮಯದಲ್ಲಿ ತಮ್ಮ ಐಫೋನ್ ಕೂಡ ಕೆಲಸ ಮಾಡುವುದನ್ನು ನಿಲ್ಲಿಸಿತ್ತು ಎಂದು ಹೇಳಿದ್ದಾರೆ.
ಹಾಸ್ಯನಟ ಮತ್ತು ನಿರ್ಮಾಪಕ ಟ್ರೆವರ್ ನೋವಾ ಅವರೊಂದಿಗೆ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಆಲ್ಟ್ ಮ್ಯಾನ್, "ನಾನಾಗ ನನ್ನ ಹೋಟೆಲ್ ಕೋಣೆಯಲ್ಲಿದ್ದೆ ಮತ್ತು ಈ ಬಗ್ಗೆ ನನಗೆ ಕರೆ ಬಂದಿತು. ನನ್ನನ್ನು ಓಪನ್ ಎಐ ಮಂಡಳಿಯಿಂದ ಯಾಕೆ ವಜಾಗೊಳಿಸಲಾಗಿದೆ ಮತ್ತು ಮುಂದೇನು ಎಂಬುದು ನನಗೆ ತಿಳಿಯದಂತಾಗಿತ್ತು" ಎಂದು ಹೇಳಿದರು.
"ಕೆಲ ಕಾಲ ನನ್ನ ಫೋನ್ ಕೂಡ ಕೆಲಸ ಮಾಡುವುದನ್ನು ನಿಲ್ಲಿಸಿತ್ತು. ಫೋನ್ಗೆ ವಿಪರೀತ ಸಂದೇಶಗಳು ಬರುತ್ತಿದ್ದವು ಮತ್ತು ಅವುಗಳ ನೋಟಿಫಿಕೇಶನ್ಗಳಿಂದ ಫೋನ್ ಕೆಲ ಹೊತ್ತು ಸ್ಥಗಿತವಾಗಿತ್ತು. ಕೆಲ ಮೇಸೇಜುಗಳು ನನಗೆ ತಡವಾಗಿ ಬಂದವು. ನಂತರ ಏನಾಯಿತು ಎಂಬುದು ಜಗತ್ತಿಗೆ ಗೊತ್ತಿದೆ" ಎಂದು ಅವರು ತಿಳಿಸಿದರು. "ಆ ಕ್ಷಣದಲ್ಲಿ ನನಗೆ ಎಲ್ಲವೂ ಗೊಂದಲಮಯವಾಗಿತ್ತು ಮತ್ತು ಮಂಡಳಿಯ ನಿರ್ಧಾರದಿಂದ ನನಗೆ ತೀರಾ ಅಸಮಾಧಾನವಾಗಿತ್ತು. ಆಗ ಎಲ್ಲವೂ ನನಗೆ ಒಂದು ಕನಸಿನಂತೆ ಭಾಸವಾಗುತ್ತಿತ್ತು ಮತ್ತು ನಡೆಯುತ್ತಿರುವುದು ನಿಜವೆಂದು ನನಗೆ ಕೂಡಲೇ ನಂಬಲಾಗಲಿಲ್ಲ" ಎಂದು ಅವರು ಹೇಳಿದರು.
ಕಳೆದ ತಿಂಗಳು ಓಪನ್ಎಐ ಮಂಡಳಿಯು ಆಲ್ಟ್ಮ್ಯಾನ್ ಅವರನ್ನು ಕಂಪನಿಯಿಂದ ಹೊರಹಾಕಿತ್ತು. ಆದರೆ ಆಗಿನ ಮಂಡಳಿ ಹಾಗೆ ಮಾಡಲು ನಿಜವಾದ ಕಾರಣ ಏನೆಂಬುದು ಈಗಲೂ ನಿಗೂಢವಾಗಿಯೇ ಇದೆ. ಮೈಕ್ರೊಸಾಫ್ಟ್ನ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಸೇರಿದಂತೆ ಕಂಪನಿಯ ಅನೇಕ ಹಿರಿಯ ಅಧಿಕಾರಿಗಳಿಗೆ ಕೂಡ ಓಪನ್ ಎಐ ಮಂಡಳಿಯ ಈ ನಿರ್ಧಾರದ ಬಗ್ಗೆ ತಿಳಿದಿರಲಿಲ್ಲ. ಮೈಕ್ರೋಸಾಫ್ಟ್ ಓಪನ್ಎಐ ನಲ್ಲಿ ಪ್ರಮುಖ ಹೂಡಿಕೆದಾರನಾಗಿದ್ದು, ಶೇಕಡಾ 49 ರಷ್ಟು ಪಾಲನ್ನು ಹೊಂದಿದೆ. ಓಪನ್ಎಐನ ಹೊಸ ಆಡಳಿತ ಮಂಡಳಿಯು ಅಧ್ಯಕ್ಷ ಬ್ರೆಟ್ ಟೇಲರ್, ಲ್ಯಾರಿ ಸಮ್ಮರ್ಸ್ ಮತ್ತು ಆಡಮ್ ಡಿ'ಏಂಜೆಲೊ ಅವರನ್ನು ಒಳಗೊಂಡಿದೆ.
ಇದನ್ನೂ ಓದಿ : ಸ್ವೀವ್ ಜಾಬ್ಸ್ ಸಹಿ ಮಾಡಿದ 4 ಡಾಲರ್ ಮೊತ್ತದ ಚೆಕ್ 36 ಸಾವಿರ ಡಾಲರ್ಗೆ ಮಾರಾಟ!