ವಾಷಿಂಗ್ಟನ್: ಕೃತಕ ಬುದ್ಧಿಮತ್ತೆಯ (ಎಐ) ಅಪಾಯಗಳನ್ನು ನಿರ್ವಹಿಸಲು ಮತ್ತು ಅಮೆರಿಕವನ್ನು ಜಾಗತಿಕ ಎಐ ನಾಯಕನನ್ನಾಗಿ ಮಾಡಲು ಯುಎಸ್ ಅಧ್ಯಕ್ಷ ಜೋ ಬೈಡನ್ ಸೋಮವಾರ ಪ್ರಮುಖ ಆದೇಶವೊಂದಕ್ಕೆ ಸಹಿ ಹಾಕಿದ್ದಾರೆ. ಈ ಆದೇಶವು ಎಐ ಸುರಕ್ಷತೆ ಮತ್ತು ಭದ್ರತೆಗಾಗಿ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತದೆ ಮತ್ತು ಬಳಕೆದಾರರ ಗೌಪ್ಯತೆಯನ್ನು ರಕ್ಷಿಸುತ್ತದೆ. ಸಮಾನತೆ ಮತ್ತು ನಾಗರಿಕ ಹಕ್ಕುಗಳ ರಕ್ಷಣೆ, ಗ್ರಾಹಕರು ಮತ್ತು ಕಾರ್ಮಿಕರ ಪರವಾಗಿ ಕೆಲಸ, ನಾವೀನ್ಯತೆ ಮತ್ತು ಸ್ಪರ್ಧೆಗೆ ಉತ್ತೇಜನ, ಅಮೆರಿಕವನ್ನು ವಿಶ್ವದ ನಾಯಕನನ್ನಾಗಿ ಮುನ್ನಡೆಸುವುದು ಹೀಗೆ ಅನ್ನೂ ಅನೇಕ ಉದ್ಧೇಶಗಳನ್ನು ಸಾಧಿಸುವ ದೃಷ್ಟಿಕೋನವನ್ನು ಈ ಆದೇಶ ಒಳಗೊಂಡಿದೆ.
ಎಐ ಅಭಿವೃದ್ಧಿ ಮತ್ತು ಬಳಕೆಯನ್ನು ನಿಯಂತ್ರಿಸಲು ಅಮೆರಿಕದ ಸರ್ಕಾರವು ಭಾರತ ಸೇರಿದಂತೆ ವಿದೇಶಗಳಲ್ಲಿನ ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಅಂತರರಾಷ್ಟ್ರೀಯ ಚೌಕಟ್ಟಿನಲ್ಲಿ ಕೆಲಸ ಮಾಡಲಿದೆ. ಅತ್ಯಂತ ಶಕ್ತಿಶಾಲಿ ಎಐ ವ್ಯವಸ್ಥೆಗಳ ಡೆವಲಪರ್ಗಳು ತಮ್ಮ ಸುರಕ್ಷತಾ ಪರೀಕ್ಷಾ ಫಲಿತಾಂಶಗಳು ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಯುಎಸ್ ಸರ್ಕಾರದೊಂದಿಗೆ ಹಂಚಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
"ರಕ್ಷಣಾ ಉತ್ಪಾದನಾ ಕಾಯ್ದೆಗೆ ಅನುಗುಣವಾಗಿ ರಾಷ್ಟ್ರೀಯ ಭದ್ರತೆ, ರಾಷ್ಟ್ರೀಯ ಆರ್ಥಿಕ ಭದ್ರತೆ ಅಥವಾ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುವ ಯಾವುದೇ ಕೃತಕ ಬುದ್ಧಿಮತ್ತೆ ಮಾದರಿಯನ್ನು ಅಭಿವೃದ್ಧಿಪಡಿಸುವ ಕಂಪನಿಗಳು ಮಾದರಿಗೆ ತರಬೇತಿ ನೀಡುವಾಗ ಫೆಡರಲ್ ಸರ್ಕಾರಕ್ಕೆ ತಿಳಿಸಬೇಕು ಮತ್ತು ಎಲ್ಲಾ ಸುರಕ್ಷತಾ ಪರೀಕ್ಷೆಗಳ ಫಲಿತಾಂಶಗಳನ್ನು ಹಂಚಿಕೊಳ್ಳಬೇಕು" ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವುದೇ ಕೃತಕ ಬುದ್ಧಿಮತ್ತೆ ಮಾದರಿಯನ್ನು ತಯಾರಿಸಿದ ನಂತರ ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವ ಮೊದಲು ಅದು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಜಿ ವ್ಯಾಪಕ ಮಾನದಂಡಗಳ ಪ್ರಕಾರ ಅದನ್ನು ಪರೀಕ್ಷೆ ಮಾಡಲಿದೆ. ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಆ ಮಾನದಂಡಗಳನ್ನು ನಿರ್ಣಾಯಕ ಮೂಲಸೌಕರ್ಯ ಕ್ಷೇತ್ರಗಳಿಗೆ ಅನ್ವಯಿಸುತ್ತದೆ ಮತ್ತು ಎಐ ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ.
ಇಂಧನ ಮತ್ತು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಗಳು ಪ್ರಮುಖ ಮೂಲಸೌಕರ್ಯಗಳಿಗೆ ಎಐ ವ್ಯವಸ್ಥೆಗಳಿಂದ ಉಂಟಾಗಬಹುದಾದ ಅಪಾಯ ಮತ್ತು ಇದರ ಜೊತೆಗೆ ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರೀಯ, ಪರಮಾಣು ಮತ್ತು ಸೈಬರ್ ಭದ್ರತಾ ಅಪಾಯಗಳನ್ನು ಸಹ ಪರಿಶೀಲಿಸುತ್ತವೆ. "ಒಟ್ಟಾರೆಯಾಗಿ ಎಐ ಕ್ಷೇತ್ರದಲ್ಲಿ ಸುರಕ್ಷತೆ ಸ್ಥಾಪಿಸಲು ಯಾವುದೇ ಸರ್ಕಾರ ತೆಗೆದುಕೊಂಡ ಅತ್ಯಂತ ಮಹತ್ವದ ಕ್ರಮಗಳು ಇವು" ಎಂದು ಬೈಡನ್ ಹೇಳಿದರು.
ಇದನ್ನೂ ಓದಿ: ಭಾರತೀಯರು ಮಹಿಳೆಯರು ದಶಕಗಳಿಂದ ವಾರಕ್ಕೆ 70 ಗಂಟೆಗಳಿಂಗಿಂತ ಹೆಚ್ಚು ಕೆಲಸ ಮಾಡ್ತಿದ್ದಾರೆ: ಎಡೆಲ್ವೆಸ್ ಎಂಡಿ ರಾಧಿಕಾ