ವಾಷಿಂಗ್ಟನ್: ಟ್ವಿಟರ್ನ ಬ್ಲೂ ಸಬ್ಸ್ಕ್ರಿಪ್ಷನ್ ಪಡೆಯಬೇಕಾದರೆ ಇನ್ನು ಮುಂದೆ ಹಣ ಪಾವತಿಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ವಿಶ್ವದ ಸಿರಿವಂತ ಉದ್ಯಮಿ ಎಲೋನ್ ಮಸ್ಕ್ ಟ್ವಿಟರ್ ಅನ್ನು ಸ್ವಾಧೀನಪಡಿಸಿಕೊಂಡು ಅದರ ಸಿಇಒ ಆದ ನಂತರ ಈ ಹೊಸ ಬದಲಾವಣೆ ಜಾರಿಗೆ ಬರಲಿದೆ.
ಹೊಸ ಟ್ವಿಟರ್ ಬ್ಲೂ ಟಿಕ್ ಸಬ್ಸ್ಕ್ರಿಪ್ಷನ್ಗಾಗಿ ಬಳಕೆದಾರರಿಗೆ ಪ್ರತಿ ತಿಂಗಳು 19.99 ಯುಎಸ್ ಡಾಲರ್ ಅಥವಾ ಸುಮಾರು 1600 ರೂಪಾಯಿ ಶುಲ್ಕ ವಿಧಿಸಲು ಯೋಜಿಸುತ್ತಿದೆ. ಬ್ಲೂ ಸಬ್ಸ್ಕ್ರಿಪ್ಷನ್ ಇದು ಟ್ವೀಟ್‌ಗಳನ್ನು ಎಡಿಟ್ ಮಾಡುವುದು ಮತ್ತು ಅನ್ಡು ಮಾಡುವಂಥ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡುತ್ತದೆ.
ಪ್ರಸ್ತುತ ಯೋಜನೆಯಡಿ ವೆರಿಫೈಡ್ ಯೂಸರ್ಸ್ 90 ದಿನಗಳ ಒಳಗೆ ಸಬ್ಸ್ಕ್ಷಿಪ್ಷನ್ ಪಡೆದರೆ ಬ್ಲೂ ಟಿಕ್ ಉಳಿಸಿಕೊಳ್ಳುತ್ತಾರೆ. ಇಲ್ಲವಾದರೆ ಅವರು ಬ್ಲೂ ಟಿಕ್ ಸಬ್ಸ್ಕ್ರಿಪ್ಷನ್ ಕಳೆದುಕೊಳ್ಳುತ್ತಾರೆ. ನವೆಂಬರ್ 7ರ ಒಳಗೆ ಈ ಫೀಚರ್ ಅನ್ನು ಜಾರಿಗೊಳಿಸುವಂತೆ ಈ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ತಿಳಿಸಲಾಗಿದೆ. ಇಲ್ಲವಾದರೆ ಅವರನ್ನು ನೌಕರಿಯಿಂದ ಕಿತ್ತೆಸೆಯಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಯೂಸರ್ ವೆರಿಫಿಕೇಶನ್ ಪ್ರಕ್ರಿಯೆಯನ್ನು ಮರುಪರಿಶೀಲಿಸಲಾಗುವುದು ಎಂದು ಎಲೋನ್ ಮಸ್ಕ್ ತಮ್ಮ ಟ್ವೀಟ್ನಲ್ಲಿ ಹೇಳಿದ ಒಂದು ದಿನದ ನಂತರ ಟ್ವಿಟರ್ ಬ್ಲೂ ಟಿಕ್ ಸಬ್ಸ್ಕ್ರಿಪ್ಷನ್ ನಿಯಮ ಬದಲಾವಣೆಯ ಬಗ್ಗೆ ವರದಿಗಳು ಬಂದಿವೆ.
ಒಂದು ವರ್ಷದ ಹಿಂದೆ ಟ್ವಿಟರ್ ಬ್ಲೂ ಸಬ್ಸ್ಕ್ರಿಪ್ಷನ್ ಆರಂಭಿಸಲಾಗಿತ್ತು. ಜಾಹೀರಾತು ಇಲ್ಲದೇ ಕೆಲ ಪ್ರಕಾಶಕರ ಲೇಖನಗಳನ್ನು ಓದಲು ಮತ್ತು ಹೋಮ್ ಸ್ಕ್ರೀನ್ ಬಣ್ಣ ಬದಲಾಯಿಸುವುದು ಮುಂತಾದ ಫೀಚರ್ಗಳು ಇದರಲ್ಲಿವೆ.