ನವದೆಹಲಿ: ಭಾರತವು ಜಗತ್ತಿನಲ್ಲಿ 2ನೇ ಅತಿದೊಡ್ಡ ಮೊಬೈಲ್ ತಯಾರಿಕಾ ದೇಶವಾಗಿ ಹೊರಹೊಮ್ಮಿದೆ. ಮೊಬೈಲ್ಗಳ ಮೂಲ ಉಪಕರಣ ತಯಾರಕರು, ಮೂಲ ವಿನ್ಯಾಸ ತಯಾರಕರು ಮತ್ತು ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳಿಂದ ಭಾರಿ ಹೂಡಿಕೆಯಿಂದಾಗಿ ಭಾರತವು ಈಗ ಮೊಬೈಲ್ ಫೋನ್ಗಳ ಎರಡನೇ ಅತಿದೊಡ್ಡ ಉತ್ಪಾದನಾ ಕೇಂದ್ರವಾಗಿದೆ ಎಂದು ಹೊಸ ವರದಿಯೊಂದು ಮಂಗಳವಾರ ತಿಳಿಸಿದೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, 2023 ರಲ್ಲಿ ಭಾರತದಲ್ಲಿ ತಯಾರಾದ ಒಟ್ಟು ಫೋನ್ಗಳ ಪೈಕಿ ಸುಮಾರು 22 ಪ್ರತಿಶತ ಪೋನ್ಗಳನ್ನು ರಫ್ತು ಮಾಡುವ ನಿರೀಕ್ಷೆಯಿದೆ. ಆದಾಗ್ಯೂ ದೀರ್ಘಾವಧಿಯಲ್ಲಿ ಮೊಬೈಲ್ ಫೋನ್ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಚೀನಾದ ಪಾತ್ರ ಮುಂದುವರಿಯಲಿದೆ ಎಂದು ಹಿರಿಯ ಸಂಶೋಧನಾ ವಿಶ್ಲೇಷಕ ಇವಾನ್ ಲ್ಯಾಮ್ ಹೇಳಿದ್ದಾರೆ.
'ಮೇಕ್ ಇನ್ ಇಂಡಿಯಾ' ಉಪಕ್ರಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ (ಎಫ್ವೈ 24) ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ಭಾರತವು 5.5 ಬಿಲಿಯನ್ ಡಾಲರ್ (45,000 ಕೋಟಿ ರೂ.) ಮೌಲ್ಯದ ಮೊಬೈಲ್ ಫೋನ್ಗಳನ್ನು ರಫ್ತು ಮಾಡಿದೆ ಎಂದು ಸರ್ಕಾರ ಮತ್ತು ಉದ್ಯಮದ ಇತ್ತೀಚಿನ ಅಂಕಿ ಅಂಶಗಳು ತೋರಿಸಿವೆ. ವಾಣಿಜ್ಯ ಇಲಾಖೆ ಮತ್ತು ಇಂಡಿಯಾ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಅಂದಾಜಿನ ಪ್ರಕಾರ, ಏಪ್ರಿಲ್-ಆಗಸ್ಟ್ ಅವಧಿಯಲ್ಲಿ 5.5 ಬಿಲಿಯನ್ ಡಾಲರ್ ಮೌಲ್ಯದ ಮೊಬೈಲ್ ಫೋನ್ ರಫ್ತು ಮಾಡಲಾಗಿದೆ.
ದಕ್ಷಿಣ ಕೊರಿಯಾದ ಕಂಪನಿ ಸ್ಯಾಮ್ಸಂಗ್ ನೋಯ್ಡಾದಲ್ಲಿ ತನ್ನ ಅತಿದೊಡ್ಡ ಮೊಬೈಲ್ ತಯಾರಿಕಾ ಕಾರ್ಖಾನೆಯನ್ನು ಆರಂಭಿಸಿದೆ. ಉತ್ಪಾದನೆ, ಜೋಡಣೆ ಅಥವಾ ಔಟ್ಸೋರ್ಸ್ ಆಗಿರಲಿ ಭಾರತವು ಮೊಬೈಲ್ ಫೋನ್ ಕಂಪನಿಗಳ ಮೊದಲ ತಾಣವಾಗಿ ಹೊರಹೊಮ್ಮಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ 1,20,000 ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಫೋನ್ಗಳನ್ನು ರಫ್ತು ಮಾಡಲು ಭಾರತ ಸಜ್ಜಾಗಿದೆ. ಇದರಲ್ಲಿ ಆಪಲ್ ಶೇಕಡಾ 50 ಕ್ಕಿಂತ ಹೆಚ್ಚು ಪಾಲು ಹೊಂದಿದೆ. ತಮಿಳುನಾಡಿನ ಫಾಕ್ಸ್ಕಾನ್, ಪೆಗಾಟ್ರಾನ್ ಮತ್ತು ಕರ್ನಾಟಕದ ವಿಸ್ಟ್ರಾನ್ ಇವು ಭಾರತದಲ್ಲಿ ಆಪಲ್ ಫೋನ್ಗಳನ್ನು ತಯಾರಿಸುತ್ತಿವೆ. ಏತನ್ಮಧ್ಯೆ, ವರದಿಯ ಪ್ರಕಾರ, ಮೂಲ ವಿನ್ಯಾಸ ತಯಾರಕರು (ಒಡಿಎಂ) ಮತ್ತು ಸ್ವತಂತ್ರ ವಿನ್ಯಾಸ ಕಂಪನಿ (ಒಡಿಎಂ / ಐಡಿಎಚ್) ಗಳ ಸ್ಮಾರ್ಟ್ಫೋನ್ ಉತ್ಪಾದನೆ ಈ ವರ್ಷದ ಮೊದಲಾರ್ಧದಲ್ಲಿ ಶೇಕಡಾ 6 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ಸ್ಯಾಮ್ಸಂಗ್ ಗ್ಯಾಲಕ್ಸಿ S23 FE ಇದೇ ವಾರ ಬಿಡುಗಡೆ: ಬೆಲೆ 50 ಸಾವಿರದಿಂದ ಆರಂಭ