ಸ್ಯಾನ್ ಫ್ರಾನ್ಸಿಸ್ಕೋ : ವಿಶ್ವದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಸ್ಯಾಮ್‌ಸಂಗ್ ತನ್ನ ಮುಂಬರುವ ಗ್ಯಾಲಕ್ಸಿ Z ಫ್ಲಿಪ್ 5 ಮತ್ತು ಗ್ಯಾಲಕ್ಸಿ Z ಫೋಲ್ಡ್ 5 ಸ್ಮಾರ್ಟ್ಫೋನ್ಗಳೊಂದಿಗೆ ಹೊಸ ಟ್ರೈ ಫೋಲ್ಡಬಲ್ (ಮೂರು ಬಾರಿ ಮಡಚಬಲ್ಲ) ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಲಿದೆ ಎಂದು ವರದಿಯಾಗಿದೆ. ಕಂಪನಿಯು ಈ ವರ್ಷ Galaxy S23 FE ಅನ್ನು ಲಾಂಚ್ ಮಾಡುವುದಿಲ್ಲ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಟ್ರೈ ಫೋಲ್ಡಿಂಗ್ ಗ್ಯಾಲಕ್ಸಿ ಫೋನ್ ಹೇಗಿರಬಹುದು ಎಂಬುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದು ಕಾಂಪ್ಯಾಕ್ಟ್ ಸ್ಮಾರ್ಟ್‌ಫೋನ್ ಆಗಿರಬಹುದು ಅಥವಾ ದೊಡ್ಡ ಸ್ಕ್ರೀನ್ ಟ್ಯಾಬ್ಲೆಟ್ ಆಗಿರಬಹುದು ಎನ್ನಲಾಗಿದೆ. ಒಟ್ಟಾರೆ ಇದು ಮಡಿಸಬಹುದಾದ OLED ಸ್ಕ್ರೀನ್ ಹೊಂದಿದ್ದು ಎರಡು ಹಿಂಜ್ಗಳನ್ನು ಹೊಂದಿರಲಿದೆ.
ಈ ವರ್ಷದ ಜನವರಿಯಲ್ಲಿ ಸ್ಯಾಮ್ಸಂಗ್, ಫ್ಲೆಕ್ಸ್ ಹೈಬ್ರಿಡ್ (Flex Hybrid) ಪದಕ್ಕಾಗಿ ಟ್ರೇಡ್‌ಮಾರ್ಕ್‌ಗಾಗಿ ಅರ್ಜಿ ಸಲ್ಲಿಸಿದೆ. ಏತನ್ಮಧ್ಯೆ ಈ ತಿಂಗಳ ಆರಂಭದಲ್ಲಿ ಈ ವರ್ಷ ಎಸ್-ಸರಣಿಯ ಫ್ಯಾನ್ ಆವೃತ್ತಿಯನ್ನು ಲಾಂಚ್ ಮಾಡಲು ಯೋಜಿಸುತ್ತಿಲ್ಲ ಎಂದು ವರದಿಯಾಗಿದೆ. ಅಂದರೆ ಗ್ಯಾಲಕ್ಸಿ ಎಸ್ 23 ಎಫ್‌ಇ ಈ ವರ್ಷ ಲಾಂಚ್ ಆಗುವುದಿಲ್ಲ. ಕಂಪನಿಯು ಕಳೆದ ವರ್ಷ ಗ್ಯಾಲಕ್ಸಿ S22 FE ಅನ್ನು ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ ಕಂಪನಿ ಫ್ಯಾನ್ ಆವೃತ್ತಿಯ ಆಫರ್ಗಳನ್ನು ನಿಲ್ಲಿಸಿದೆ ಎನ್ನಲಾಗಿದೆ.
ಹಾಳೆಯಂತೆ ಮಡಚಬಹುದು ಫೋಲ್ಡಬಲ್ ಫೋನ್: ಮಡಚಬಹುದಾದ ಫೋನ್ ಎಂದರೆ ಕಾಗದದ ಹಾಳೆಯಂತೆಯೇ ಅರ್ಧದಷ್ಟು ಮಡಚಬಹುದಾದ ವಿಶೇಷ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್. 2011 ರಲ್ಲಿ ಸ್ಯಾಮ್ಸಂಗ್ ಮೊಟ್ಟ ಮೊದಲ ಬಾರಿಗೆ ಮಡಚಬಹುದಾದ ಅಥವಾ ಸುತ್ತಿಕೊಳ್ಳಬಹುದಾದ ಈ ಬೆಂಡೆಬಲ್ ಡಿಸ್ಪ್ಲೇಗಳ ಬಗ್ಗೆ ಮಾಹಿತಿ ನೀಡಲು ಪ್ರಾರಂಭಿಸಿತು. ಆದರೆ 2018 ರಲ್ಲಿ ಮೊದಲ ಮಡಚಬಹುದಾದ ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಲಾಯಿತು.
ಹಳೆಯ ಫೋನ್ಗಳು ನಿಜವಾದ ಫೋಲ್ಡಬಲ್ ಫೋನ್ಗಳು : ಫೋಲ್ಡಬಲ್ ಪರದೆಗಳು ಹೊಸದೇನಲ್ಲ. ಒಟ್ಟಾರೆಯಾಗಿ, ನಾವು ಅವುಗಳನ್ನು ವರ್ಷಗಳಿಂದ ವೀಕ್ಷಿಸುತ್ತಿದ್ದೇವೆ. ನೀವು ಫೋಲ್ಡಬಲ್ ಫೋನ್ ಎಂಬ ಪದವನ್ನು ಬಳಸಿದಾಗ ಬಹುಶಃ ಹಳೆಯ ಫ್ಲಿಪ್ ಫೋನ್ ಮನಸ್ಸಿಗೆ ಬರುತ್ತದೆ. ಒಂದು ಬದಿಯಲ್ಲಿ ಕೀಬೋರ್ಡ್ ಮತ್ತು ಇನ್ನೊಂದು ಬದಿಯಲ್ಲಿ ಸಣ್ಣ ಪರದೆಯನ್ನು ಹೊಂದಿರುವ ಆ ಸಾಧನಗಳು ಬೇರಯೇ ಆಗಿದ್ದವು. ನಿಜವಾಗಿಯೂ ಅವು ಮೊದಲ ಫೋಲ್ಡಬಲ್ ಫೋನ್‌ಗಳಾಗಿವೆ.
ಅಕ್ಟೋಬರ್ 2019 ರಲ್ಲಿ ತನ್ನ ಸರ್ಫೇಸ್ ಈವೆಂಟ್ ಸಮಯದಲ್ಲಿ, ಮೈಕ್ರೋಸಾಫ್ಟ್ ಕಂಪನಿಯು ಸರ್ಫೇಸ್ ಡ್ಯುವೋ ಹೆಸರಿನ ಫೋಲ್ಡಬಲ್ ಫೋನ್ ಅನ್ನು ಪ್ರದರ್ಶಿಸಿತ್ತು. ಇದು ಮಡಚಬಹುದಾದ ಆಂಡ್ರಾಯ್ಡ್ ಫೋನ್ ಆಗಿತ್ತು. ಗ್ಯಾಲಕ್ಸಿ ಪೋಲ್ಡ್ಗೆ ಹೋಲಿಸಿದರೆ Duo ವಿಭಿನ್ನವಾಗಿದೆ. ಇದು ಎರಡು ಸ್ಕ್ರೀನ್ ಇರುವ ಫೋನ್ ಆಗಿದ್ದು, ಪುಸ್ತಕದಂತೆ ತೆರೆಯಬಹುದು ಮತ್ತು ಮುಚ್ಚಬಹುದು. ಇದರಲ್ಲಿ ಸ್ಟೈಲಸ್ ಅನ್ನು ಸಹ ಬಳಸಬಹುದು. ನವೆಂಬರ್ 7, 2018 ರಂದು ಸ್ಯಾಮ್‌ಸಂಗ್ ತನ್ನ ಮೊದಲ ಫೋಲ್ಡಿಂಗ್ ಫೋನ್, ಗ್ಯಾಲಕ್ಸಿ ಫೋಲ್ಡ್ ಅನ್ನು ಘೋಷಿಸಿತ್ತು.
ಇದನ್ನೂ ಓದಿ : 45 ಲಕ್ಷಕ್ಕೆ ಹರಾಜಿನಲ್ಲಿ ಮಾರಾಟವಾಯಿತು ಮೊದಲ ತಲೆಮಾರಿನ ಐಫೋನ್