ನವದೆಹಲಿ: ಭಾರತದಲ್ಲಿ ಲ್ಯಾಪ್ಟಾಪ್ಗಳನ್ನು ತಯಾರಿಸಲು ಚಿಪ್ ತಯಾರಕ ಕಂಪನಿ ಇಂಟೆಲ್ ಶುಕ್ರವಾರ ಎಂಟು ಸ್ಥಳೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವೆ (ಇಎಂಎಸ್) ಕಂಪನಿಗಳು ಮತ್ತು ಮೂಲ ವಿನ್ಯಾಸ ತಯಾರಕರೊಂದಿಗೆ (ಒಡಿಎಂ) ಒಪ್ಪಂದ ಮಾಡಿಕೊಂಡಿದೆ.
ಭಗವತಿ ಪ್ರಾಡಕ್ಟ್ಸ್ ಲಿಮಿಟೆಡ್, ಡಿಕ್ಸನ್ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್, ಕೇನ್ಸ್ ಟೆಕ್ನಾಲಜಿ ಇಂಡಿಯಾ ಲಿಮಿಟೆಡ್, ಆಪ್ಟಿಮಸ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಪನಾಚೆ ಡಿಜಿಲೈಫ್ ಲಿಮಿಟೆಡ್, ಸ್ಮೈಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಸಿರ್ಮಾ ಎಸ್ಜಿಎಸ್ ಟೆಕ್ನಾಲಜಿ ಲಿಮಿಟೆಡ್ ಮತ್ತು ವಿವಿಡಿಎನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳೊಂದಿಗೆ ಇಂಟೆಲ್ ಒಪ್ಪಂದ ಮಾಡಿಕೊಂಡಿದೆ.
"ಇಂಟೆಲ್ ನಂಥ ಜಾಗತಿಕ ಸಂಸ್ಥೆಗಳು ಭಾರತದೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ. ಲ್ಯಾಪ್ ಟಾಪ್ ಗಳು ಮತ್ತು ಕಂಪ್ಯೂಟಿಂಗ್ಗಾಗಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆ ನಿರ್ಮಿಸಲು ಮತ್ತು ವೇಗವರ್ಧಿಸಲು ಇಂಟೆಲ್ ಸಹಾಯ ಮಾಡುತ್ತಿದೆ" ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಒಪ್ಪಂದದ ಅಡಿ ಇಂಟೆಲ್ ಭಾರತದಲ್ಲಿ ಸಂಪೂರ್ಣ ಎಂಟ್ರಿ ಲೆವೆಲ್ ಲ್ಯಾಪ್ಟಾಪ್ಗಳ ಉತ್ಪಾದನೆಗೆ ಅನುಕೂಲವಾಗುವಂತೆ ತನ್ನ ಪರಿಣತಿ ಹಂಚಿಕೊಂಡಿದೆ. ಅತ್ಯಾಧುನಿಕ ಎಸ್ಎಂಟಿ ಲೈನ್ಗಳನ್ನು ಬಳಸುವುದು, ಘಟಕಗಳಿಗೆ ಗುಣಮಟ್ಟ ನಿಯಂತ್ರಣ ಪ್ರಕ್ರಿಯೆಯನ್ನು ಸ್ಥಾಪಿಸುವುದು ಮತ್ತು ಸಿದ್ಧಪಡಿಸಿದ ಉತ್ಪನ್ನಗಳ ಮಾನದಂಡವನ್ನು ಈ ಒಪ್ಪಂದ ಒಳಗೊಂಡಿದೆ.
"ಲ್ಯಾಪ್ಟಾಪ್ ಉತ್ಪಾದನೆ ಆರಂಭಿಸುವ ಮೂಲಕ ಸರ್ಫೇಸ್ ಮೌಂಟ್ ಟೆಕ್ನಾಲಜಿ ಅಸೆಂಬ್ಲಿಯಿಂದ ಫಿನಿಶ್ಡ್ ಪ್ರಾಡಕ್ಟ್ವರೆಗೆ ನಾವು ಮೇಕ್ ಇನ್ ಇಂಡಿಯಾ ಉಪಕ್ರಮದ ಬೇಡಿಕೆಗಳನ್ನು ಪೂರೈಸುವುದಲ್ಲದೇ ರಾಷ್ಟ್ರದ ತಾಂತ್ರಿಕ ಪ್ರಗತಿಗೆ ಕೊಡುಗೆ ನೀಡುತ್ತಿದ್ದೇವೆ" ಎಂದು ಇಂಟೆಲ್ ಭಾರತ ವಲಯದ ಉಪಾಧ್ಯಕ್ಷ ಮತ್ತು ಎಂಡಿ ಸಂತೋಷ್ ವಿಶ್ವನಾಥನ್ ಹೇಳಿದರು.
ಇಂಟೆಲ್ ನವೆಂಬರ್ ಕೊನೆಯಲ್ಲಿ ಇಂಡಿಯಾ ಟೆಕ್ ಇಕೋಸಿಸ್ಟಮ್ ಶೃಂಗಸಭೆ ಆಯೋಜಿಸಲಿದ್ದು, ಭಾರತದಲ್ಲಿ ತಯಾರಿಸಲಾಗುತ್ತಿರುವ ಸಾಧನಗಳ ಸಂಗ್ರಹಣೆಯನ್ನು ಪ್ರದರ್ಶಿಸಲು ದೊಡ್ಡ ಸಂಖ್ಯೆಯ ಸ್ಥಳೀಯ ಉದ್ಯಮಗಳನ್ನು ಒಂದೇ ವೇದಿಕೆಗೆ ತರಲಿದೆ.
ಇಂಟೆಲ್ ಕಾರ್ಪ್ ಇದು ಸಿಪಿಯು ಮತ್ತು ಸೆಮಿಕಂಡಕ್ಟರ್ಗಳನ್ನು ತಯಾರಿಸುವ ವಿಶ್ವದ ಅತಿದೊಡ್ಡ ಕಂಪನಿಯಾಗಿದೆ. ಕಂಪನಿಯು ತನ್ನ ಎಕ್ಸ್ 86 ಮಾದರಿಯ ಸಿಪಿಯುಗಳಿಗೆ ಹೆಸರುವಾಸಿಯಾಗಿದೆ. ಇಂಟೆಲ್ ಅನ್ನು 1968 ರಲ್ಲಿ ಗಾರ್ಡನ್ ಮೂರ್ ಮತ್ತು ರಾಬರ್ಟ್ ನೊಯ್ಸ್ ನೇತೃತ್ವದ ಫೇರ್ ಚೈಲ್ಡ್ ಸೆಮಿಕಂಡಕ್ಟರ್ ಎಂಜಿನಿಯರ್ಗಳ ಗುಂಪು ಸ್ಥಾಪಿಸಿತು.
ಇದನ್ನೂ ಓದಿ : ಫೇಸ್ಬುಕ್, ಇನ್ಸ್ಟಾದಲ್ಲಿ ನಿಮ್ಮ ಇಂಟರ್ನೆಟ್ ಜಾಲಾಟ ಟ್ರ್ಯಾಕ್ ಮಾಡದಂತೆ ತಡೆಯುವುದು ಹೇಗೆ? ಇಲ್ಲಿದೆ ಮಾಹಿತಿ