ಕ್ಯಾಲಿಫೋರ್ನಿಯಾ: ಆರ್ಥಿಕ ಹಿಂಜರಿತದ ಭೀತಿಯಿಂದ ಆರ್ಥಿಕ ಹೊರೆ ತಗ್ಗಿಸಲು ಜಗತ್ತಿನಾದ್ಯಂತ ಐಟಿ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಆಪಲ್ ಹೊರತುಪಡಿಸಿ ಎಲ್ಲಾ ಪ್ರಮುಖ ಐಟಿ ಕಂಪನಿಗಳು ಉದ್ಯೋಗಿಗಳ ಕಡಿತ ಅನುಸರಿಸಿವೆ. ಈ ಕಂಪನಿಗಳಿಗಿಂತ ಭಿನ್ನವಾಗಿ ಮತ್ತೊಂದು ಟೆಕ್ ದೈತ್ಯ ಇಂಟೆಲ್ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ. ಉದ್ಯೋಗಿಗಳನ್ನು ವಜಾಗೊಳಿಸದೆ ಅವರ ಸಂಬಳವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಇದರೊಂದಿಗೆ, ಕಂಪನಿಯ ಸಿಇಒ ಮತ್ತು ಕಾರ್ಯನಿರ್ವಾಹಕ ಮಟ್ಟದ ಉದ್ಯೋಗಿಗಳಿಂದ ಕೆಳ ಹಂತದ ಉದ್ಯೋಗಿಗಳವರೆಗೆ ಈ ನಿಬಂಧನೆಯನ್ನು ಜಾರಿಗೊಳಿಸಲಾಗುವುದು ಎಂದು ಇಂಟೆಲ್ ಹೇಳಿದೆ.
ಇಂಟೆಲ್‌ನ ಇತ್ತೀಚಿನ ನಿರ್ಧಾರದ ಭಾಗವಾಗಿ, CEO ಪ್ಯಾಟ್ ಗೆಲ್ಸಿಂಗರ್‌ರನ್ನು ಶೇಕಡಾ 25 ರಷ್ಟು ಕಡಿತಗೊಳಿಸಲಾಗುವುದು, ಕಾರ್ಯನಿರ್ವಾಹಕ ಮಟ್ಟದ ಉದ್ಯೋಗಿಗಳು ಶೇಕಡಾ 15 ರಷ್ಟು, ಹಿರಿಯ ವ್ಯವಸ್ಥಾಪಕರು 10 ಶೇಕಡಾ ಮತ್ತು ಮಧ್ಯಮ ಮಟ್ಟದ ವ್ಯವಸ್ಥಾಪಕರನ್ನು ಶೇಕಡಾ 5 ರಷ್ಟು ಸಂಬಳ ಕಡಿತಗೊಳಿಸಲಾಗುವುದು. ಮುಂಬರಲಿರುವ ಆರ್ಥಿಕ ಹಿಂಜರಿತದ ಹಿನ್ನೆಲೆ ಕಂಪನಿಯ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ಸಲುವಾಗಿ ನಾವು ನೌಕರರ ವೇತನವನ್ನು ಕಡಿತಗೊಳಿಸಲು ನಿರ್ಧರಿಸಿದ್ದೇವೆ. ಇದು ಕಂಪನಿಯ ಭವಿಷ್ಯದ ನಿರ್ಧಾರಗಳಿಗೆ ಹೆಚ್ಚು ಸಹಾಯ ಮಾಡುತ್ತದೆ ಎಂದು ಇಂಟೆಲ್ ಹೇಳಿದೆ.
ಇಂಟೆಲ್ ವರ್ಷಗಳ ಕಾಲ PC ಚಿಪ್ ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. ಕೊರೊನಾ ಪರಿಸ್ಥಿತಿಯ ಹಿನ್ನೆಲೆ ಪೂರೈಕೆ ವ್ಯವಸ್ಥೆಯಲ್ಲಿನ ಅಡಚಣೆಯಿಂದಾಗಿ ಕಂಪನಿಯ ಮಾರಾಟವು ನಿಧಾನಗೊಂಡಿದೆ. ಮತ್ತೊಂದೆಡೆ, ಇಂಟೆಲ್ ಚಿಪ್‌ಸೆಟ್ ವಲಯದಲ್ಲಿ AMD ಯಿಂದ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ, ಇಂಟೆಲ್‌ನ ಮಾರುಕಟ್ಟೆ ಪಾಲು ಕೆಲವು ತಿಂಗಳುಗಳಿಂದ ಕಡಿಮೆಯಾಗುತ್ತಿದೆ. ಈ ಹಿನ್ನೆಲೆ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗಗಳಲ್ಲಿ ಶೇ.20ರಷ್ಟು ಸಿಬ್ಬಂದಿಯನ್ನು ವಜಾ ಮಾಡಬಹುದು ಎಂಬ ಸುದ್ದಿ ಕಳೆದ ವರ್ಷಾಂತ್ಯದಲ್ಲಿ ಹೊರಬಿದ್ದಿತ್ತು. ಇದಕ್ಕೆ ವಿರುದ್ಧವಾಗಿ ಇಂಟೆಲ್ ತನ್ನ ಉದ್ಯೋಗಿಗಳ ಸಂಬಳವನ್ನು ಕಡಿತಗೊಳಿಸಲು ನಿರ್ಧರಿಸಿದೆ. ಮತ್ತೊಂದೆಡೆ, ಆಪಲ್ ಸಿಇಒ ಟಿಮ್ ಕುಕ್ ಅವರು ತಮ್ಮ ಸಂಬಳವನ್ನು ಶೇಕಡಾ 40 ರಷ್ಟು ಕಡಿಮೆ ಮಾಡುವುದಾಗಿ ಘೋಷಿಸಿದ್ದಾರೆ.
ಅಮೆರಿಕದಲ್ಲಿ ಉದ್ಯೋಗ ಕಡಿತ: ತಂತ್ರಜ್ಞಾನ ದೈತ್ಯ ಸಂಸ್ಥೆಗಳಾದ ಗೂಗಲ್, ಮೈಕ್ರೋಸಾಫ್ಟ್ ಮತ್ತು ಅಮೆಜಾನ್ ಕಂಪನಿಗಳು ಸಿಬ್ಬಂದಿ ಕಡಿತ ಹೆಚ್ಚಿಸಿದ್ದು, ಇದರಲ್ಲಿ ಶೇಕಡಾ 40 ರಷ್ಟು ಭಾರತೀಯರು ಉದ್ಯೋಗ ಕಳೆದುಕೊಂಡಿದ್ದಾರೆ. ಇದರಿಂದ ಜಾಬ್ ವೀಸಾದಡಿ ಆ ದೇಶಗಳಲ್ಲಿರುವ ಭಾರತೀಯರು ಉದ್ಯೋಗ ನಷ್ಟದಿಂದ, ಭಾರತಕ್ಕೆ ವಾಪಸಾಗುವ ಸ್ಥಿತಿ ಎದುರಾಗಿದೆ. ಅಲ್ಲಿಯೇ ಉಳಿದುಕೊಳ್ಳಲು ಅವರು ಮತ್ತೊಂದು ನೌಕರಿ ಗಿಟ್ಟಿಸಿಕೊಳ್ಳಬೇಕಿದೆ.
ಇಲ್ಲವಾದಲ್ಲಿ ಸಾವಿರಾರು ಟೆಕ್ಕಿಗಳು ಉದ್ಯೋಗ ವೀಸಾ ಕಳೆದುಕೊಳ್ಳಲ್ಲಿದ್ದಾರೆ. ಇದು ಟೆಕ್ಕಿಗಳನ್ನು ಸಂಕಷ್ಟಕ್ಕೆ ದೂಡಿದ್ದು, ಹೊಸ ಉದ್ಯೋಗ ಪಡೆಯುವುದು ಸವಾಲಾಗಿದೆ. ಕಳೆದ ವರ್ಷ ನವೆಂಬರ್‌ನಿಂದ ಸುಮಾರು 2 ಲಕ್ಷ ಐಟಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ಇದರಲ್ಲಿ ಗೂಗಲ್, ಮೈಕ್ರೋಸಾಫ್ಟ್, ಫೇಸ್‌ಬುಕ್ ಮತ್ತು ಅಮೆಜಾನ್ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿಯನ್ನು ಕೈಬಿಟ್ಟಿವೆ. ಇದರಲ್ಲಿ 30 ರಿಂದ 40 ಪ್ರತಿಶತದಷ್ಟು ಭಾರತೀಯ ಟೆಕ್ಕಿಗಳು ಇರುವುದು ಗಮನಾರ್ಹ..
ಓದಿ: ಭಾರಿ ನಷ್ಟದೊಂದಿಗೆ ಹೋರಾಡುತ್ತಿರುವ ಫಿಲಿಪ್ಸ್.. ಈ ಬಾರಿ 6000 ಉದ್ಯೋಗಗಳು ವಜಾ