ನವದೆಹಲಿ: ಭಾರತದಲ್ಲಿನ ಇಂಟರ್ನೆಟ್ ಬಳಕೆದಾರರು ದಿನಕ್ಕೆ ಸರಾಸರಿ ಮೂರು ಗಂಟೆಗಳಿಗಿಂತ ಹೆಚ್ಚು ಸಮಯವನ್ನು ಸೋಶಿಯಲ್ ಮೀಡಿಯಾ ನೋಡುವುದರಲ್ಲಿ ಮತ್ತು 46 ನಿಮಿಷ ಆನ್ಲೈನ್ ಗೇಮಿಂಗ್ನಲ್ಲಿ ಕಳೆಯುತ್ತಾರೆ ಎಂದು ಹೊಸ ವರದಿಯೊಂದು ಗುರುವಾರ ತಿಳಿಸಿದೆ. ತಂತ್ರಜ್ಞಾನ ನೀತಿಯ ಥಿಂಕ್ ಟ್ಯಾಂಕ್ ಸಂಸ್ಥೆ ಎಸ್ಯಾ ಸೆಂಟರ್ (Esya Centre) ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ದಿನಕ್ಕೆ 194 ನಿಮಿಷಗಳು, ಒಟಿಟಿ (ಓವರ್-ದಿ-ಟಾಪ್) ಮತ್ತು ಆನ್ಲೈನ್ ಗೇಮಿಂಗ್ನಲ್ಲಿ ಕ್ರಮವಾಗಿ 44 ನಿಮಿಷ ಮತ್ತು 46 ನಿಮಿಷಗಳಷ್ಟು ಸಮಯವನ್ನು ಜನ ವ್ಯಯಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಆನ್ಲೈನ್ ಗೇಮಿಂಗ್ಗಾಗಿ ಬಳಕೆದಾರರು ಸರಾಸರಿ ತಿಂಗಳಿಗೆ 100 ರೂ.ಗಿಂತ ಕಡಿಮೆ ಖರ್ಚು ಮಾಡುತ್ತಾರೆ ಮತ್ತು ದಿನಕ್ಕೆ ಒಂದು ಗಂಟೆಗಿಂತ ಕಡಿಮೆ ಸಮಯ ಆನ್ಲೈನ್ ಗೇಮಿಂಗ್ನಲ್ಲಿ ಕಳೆಯುತ್ತಾರೆ. ಹಾಗೆಯೇ ಒಟಿಟಿಗಾಗಿ ಬಳಕೆದಾರರು ತಿಂಗಳಿಗೆ ಸರಾಸರಿ 200 ರೂಪಾಯಿ ಖರ್ಚು ಮಾಡುತ್ತಾರೆ ಮತ್ತು 400 ನಿಮಿಷ ನೋಡುವುದರಲ್ಲಿ ವ್ಯಯಿಸುತ್ತಾರೆ.
ಈ ವರದಿಯು 2,000 ಜನರನ್ನು ಸಮೀಕ್ಷೆಗೆ ಒಳಪಡಿಸಿದೆ ಮತ್ತು 143 ಮೊಬೈಲ್ ಅಪ್ಲಿಕೇಶನ್ಗಳಾದ್ಯಂತ 20.6 ಲಕ್ಷಕ್ಕೂ ಹೆಚ್ಚು ಬಳಕೆದಾರರ ಇನ್-ಅಪ್ಲಿಕೇಶನ್ ಡೇಟಾವನ್ನು ಪರಿಶೀಲಿಸಿದೆ. "ವರದಿಯ ಸಂಶೋಧನೆಗಳು ಬಹಳ ನಿಖರವಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ. ವಿಶೇಷವಾಗಿ ಸರ್ಕಾರವು ಡಿಜಿಟಲ್ ಉದ್ಯಮಗಳಿಗೆ ಬಳಕೆದಾರ ಕೇಂದ್ರಿತ ನೀತಿಗಳನ್ನು ರೂಪಿಸುವ ಪ್ರಕ್ರಿಯೆ ನಡೆಯುತ್ತಿರುವ ಸಮಯದಲ್ಲಿ ನಮ್ಮ ವರದಿಯು ಪ್ರಾಮುಖ್ಯತೆ ಪಡೆದಿದೆ" ಎಂದು ಎಸ್ಯಾ ಕೇಂದ್ರದ ನಿರ್ದೇಶಕ ಅಮ್ಜದ್ ಅಲಿ ಖಾನ್ ಹೇಳಿದರು.
ಇದಲ್ಲದೆ, ಆನ್ಲೈನ್ ಗೇಮಿಂಗ್ ಭಾಗವಹಿಸುವಿಕೆ ಶುಲ್ಕದಲ್ಲಿ ಶೇಕಡಾ 30 ರಷ್ಟು ಹೆಚ್ಚಳ ಜಾರಿಯಾದಲ್ಲಿ ಶೇಕಡಾ 71 ರಷ್ಟು ಜನ ಆನ್ಲೈನ್ ಗೇಮಿಂಗ್ನಿಂದ ದೂರವಾಗಬಹುದು. ಹಾಗೆಯೇ ಒಟಿಟಿಗೆ ಶುಲ್ಕ ಹೆಚ್ಚಾದಲ್ಲಿ ಕೇವಲ ಶೇಕಡಾ 17 ರಷ್ಟು ಜನ ಒಟಿಟಿಯಿಂದ ದೂರವಾಗಬಹುದು. ಒಟಿಟಿ ನೋಡುವುದರಿಂದ ಒತ್ತಡ ನಿವಾರಣೆಯಾಗುತ್ತದೆ ಎಂಬುದು ಬಹುತೇಕರ ಅಭಿಪ್ರಾಯವಾಗಿದ್ದರೂ, ಶೇಕಡಾ 28 ರಷ್ಟು ಡಿಜಿಟಲ್ ನಾಗರಿಕರು ತಮ್ಮ ಭವಿಷ್ಯದ ಉದ್ಯೋಗಾವಕಾಶಗಳಿಗೆ ಆನ್ಲೈನ್ ಗೇಮಿಂಗ್ ಬೇಕೇ ಬೇಕು ಎನ್ನುತ್ತಾರೆ ಎಂದು ವರದಿ ಹೇಳಿದೆ.
ವರದಿಯ ಪ್ರಕಾರ, ಎಲ್ಲ ಬಳಕೆದಾರರು ತಿಂಗಳಿಗೊಮ್ಮೆಯಾದರೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುತ್ತಾರೆ. ಅದರಂತೆ ಒಟಿಟಿ ಮತ್ತು ಆನ್ಲೈನ್ ಗೇಮಿಂಗ್ಗೆ ಈ ಪ್ರಮಾಣ ಕ್ರಮವಾಗಿ ಶೇಕಡಾ 60 ಮತ್ತು 40 ರಷ್ಟಿದೆ. ಸುಮಾರು ಶೇಕಡಾ 89 ಬಳಕೆದಾರರು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದರೆ, ಕ್ರಮವಾಗಿ ಶೇಕಡಾ 22 ಮತ್ತು ಶೇಕಡಾ 12 ರಷ್ಟು ಜನರು ಮಾತ್ರ ಒಟಿಟಿ ಮತ್ತು ಆನ್ಲೈನ್ ಗೇಮಿಂಗ್ನಲ್ಲಿ ಸಕ್ರಿಯರಾಗಿರುತ್ತಾರೆ. ಸಾಮಾಜಿಕ ಮಾಧ್ಯಮ ಎಂಬುದು ಇಂಟರ್ನೆಟ್ ಆಧಾರಿತ ಸಂವಹನದ ರೂಪವಾಗಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳು ಬಳಕೆದಾರರಿಗೆ ಸಂಭಾಷಣೆ ನಡೆಸಲು, ಮಾಹಿತಿ ಹಂಚಿಕೊಳ್ಳಲು ಮತ್ತು ವೆಬ್ ಕಂಟೆಂಟ್ ಸೃಷ್ಟಿಸಲು ಅವಕಾಶ ನೀಡುತ್ತವೆ.
ಇದನ್ನೂ ಓದಿ : Hindu Law: ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳಿಗೆ ಆಸ್ತಿಯ ಹಕ್ಕು ವಿಚಾರ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್