ನವದೆಹಲಿ : 2023 ರ ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ 25.1 ಮಿಲಿಯನ್ ಧರಿಸಬಹುದಾದ ಸಾಧನಗಳು (wearable units) ಮಾರಾಟವಾಗಿವೆ. ಇದು ವರ್ಷದಿಂದ ವರ್ಷಕ್ಕೆ ಹೋಲಿಸಿದರೆ 80.9 ಶೇಕಡಾ ರಷ್ಟು ಬೆಳವಣಿಗೆಯಾಗಿದೆ. ಆದರೆ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಬೆಳವಣಿಗೆ ಸಮತಟ್ಟಾಗಿದೆ ಎಂದು ವರದಿಯು ತೋರಿಸಿದೆ.
ಇಂಟರ್ನ್ಯಾಷನಲ್ ಡೇಟಾ ಕಾರ್ಪೊರೇಷನ್ ಪ್ರಕಾರ, ಸ್ಮಾರ್ಟ್ ವಾಚ್‌ಗಳ ಪಾಲು ಒಂದು ವರ್ಷದ ಹಿಂದೆ ಇದ್ದ ಶೇಕಡಾ 26.8 ದಿಂದ ಶೇಕಡಾ 41.4 ಏರಿಕೆಯಾಗಿದೆ ಮತ್ತು ಇಯರ್‌ವೇರ್ ವಿಭಾಗವು ಶೇಕಡಾ 48.5 ದಷ್ಟು ಉತ್ತಮ ಬೆಳವಣಿಗೆಯನ್ನು ಕಂಡಿದೆ. ಇಮ್ಯಾಜಿನ್ ಮಾರ್ಕೆಟಿಂಗ್ ಅಥವಾ ಬೋಟ್ (boAt) ಶೇಕಡಾ 25.6 ರಷ್ಟು ಪಾಲನ್ನು ಹೊಂದಿದ್ದು, ಶೇಕಡಾ 102.4 ರಷ್ಟು ಬೆಳವಣಿಗೆಯೊಂದಿಗೆ ಅಗ್ರ ಸ್ಥಾನವನ್ನು ಉಳಿಸಿಕೊಂಡಿದೆ.
ಒಟ್ಟಾರೆ ಧರಿಸಬಹುದಾದ ಸಾಧನಗಳ ವಿಭಾಗದಲ್ಲಿ ಮೊದಲನೇ ತ್ರೈಮಾಸಿಕದಲ್ಲಿ ಫೈರ್-ಬೋಲ್ಟ್ 12.4 ಶೇಕಡಾ ಪಾಲನ್ನು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಇದು ಸ್ಮಾರ್ಟ್ ವಾಚ್ ವಿಭಾಗದಲ್ಲಿ 28.6 ಶೇಕಡಾ ಪಾಲು ಹೊಂದಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 224.2 ರಷ್ಟು ಬೆಳವಣಿಗೆ ದಾಖಲಿಸಿದೆ. Nexxbase (ನಾಯ್ಸ್) ಒಟ್ಟಾರೆ ಧರಿಸಬಹುದಾದ ಸಾಧನಗಳ ಮಾರಾಟದಲ್ಲಿ ಮೂರನೇ ಸ್ಥಾನದಲ್ಲಿದೆ. ಇದು ವರ್ಷದಿಂದ ವರ್ಷಕ್ಕೆ 97.3 ಶೇಕಡಾ ಬೆಳವಣಿಗೆ ದಾಖಲಿಸಿದ್ದು, 11.9 ಶೇಕಡಾ ಮಾರುಕಟ್ಟೆ ಪಾಲನ್ನು ಹೊಮದಿದೆ. ಆದರೆ ಸ್ಮಾರ್ಟ್‌ವಾಚ್ ವಿಭಾಗದಲ್ಲಿ ನಾಯ್ಸ್ ಕಂಪನಿಯು ಎರಡನೇ ಸ್ಥಾನಕ್ಕೆ ಇಳಿದಿದೆ. ಇದು ಮಾರುಕಟ್ಟೆಯಲ್ಲಿ ಶೇಕಡಾ 21.6 ರಷ್ಟು ಪಾಲು ಹೊಂದಿದ್ದು, ವರ್ಷದಿಂದ ವರ್ಷಕ್ಕೆ ಶೇಕಡಾ 157.6 ರಷ್ಟು ಬೆಳವಣಿಗೆ ದಾಖಲಿಸಿದೆ.
ಒಟ್ಟಾರೆ ಧರಿಸಬಹುದಾದ ಸಾಧನಗಳ ಮಾರುಕಟ್ಟೆಯಲ್ಲಿ ಆನ್‌ಲೈನ್ ಪ್ಲಾಟ್ಫಾರ್ಮ್ ಶೇಕಡಾ 73.9 ರಷ್ಟು ಪಾಲನ್ನು ಹೊಂದಿದೆ. ANC/ENC ಮೂಲಕ ಆಡಿಯೋ ಗುಣಮಟ್ಟದಲ್ಲಿ ವರ್ಧನೆಗಳು ಮತ್ತು ಕಲಾತ್ಮಕವಾಗಿ ಇಷ್ಟವಾಗುವ ವಿನ್ಯಾಸಗಳು 2023 ರಲ್ಲಿ ಪ್ರಮುಖ ಆಕರ್ಷಣೆಗಳಾಗಿವೆ. ಆರೋಗ್ಯ-ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ ಆಡಿಯೊ ಸಾಮರ್ಥ್ಯಗಳನ್ನು ಮೀರಿ ಚಲಿಸುವುದು ನಿರಂತರ ಬೆಳವಣಿಗೆಗೆ ಅತ್ಯಗತ್ಯವಾಗಿರುತ್ತದೆ ಎಂದು ಐಡಿಸಿ ಕಂಪನಿಯ ಧರಿಸಬಹುದಾದ ಸಾಧನಗಳ ಹಿರಿಯ ಮಾರುಕಟ್ಟೆ ವಿಶ್ಲೇಷಕ ವಿಕಾಸ್ ಶರ್ಮಾ ಹೇಳಿದರು.
ಸ್ಮಾರ್ಟ್‌ವಾಚ್ (ಮೂಲ ಮತ್ತು ಸುಧಾರಿತ ಸೇರಿದಂತೆ) 10.4 ಮಿಲಿಯನ್ ಮಾರಾಟಗಳೊಂದಿಗೆ ವೇಗವಾಗಿ ಬೆಳೆಯುತ್ತಿರುವ ಧರಿಸಬಹುದಾದ ಸಾಧನವಾಗಿ ಮುಂದುವರೆದಿದೆ. ಇದರ ಮಾರಾಟ ಶೇಕಡಾ 178.9 ರಷ್ಟು ಬೆಳವಣಿಗೆಯಾಗಿದೆ. ಎಲ್‌ಟಿಇ, ಡಿಜಿಟಲ್ ಪಾವತಿ ಆಯ್ಕೆಗಳು ಮತ್ತು ಹೆಚ್ಚು ನಿಖರವಾದ ಸಂವೇದಕಗಳು/ಅಲ್ಗಾರಿದಮ್‌ಗಳಂತಹ ಸುಧಾರಿತ ಸಂವಹನ ವೈಶಿಷ್ಟ್ಯಗಳೊಂದಿಗೆ ಸೇರಿಕೊಂಡು ಬ್ರ್ಯಾಂಡ್‌ಗಳು ಹೊಸ ಸ್ಮಾರ್ಟ್‌ವಾಚ್ ಗ್ರಾಹಕರನ್ನು ಆಕರ್ಷಿಸುತ್ತಿವೆ. 2023 ರಲ್ಲಿ ಸ್ಮಾರ್ಟ್‌ವಾಚ್ ಮಾರುಕಟ್ಟೆಯು 50 ಮಿಲಿಯನ್ ಯುನಿಟ್‌ಗಳನ್ನು ದಾಟಲಿದೆ. 2022 ರಲ್ಲಿ ಈ ಸಂಖ್ಯೆ 30.7 ಮಿಲಿಯನ್ ಆಗಿತ್ತು ಎಂದು ಐಡಿಸಿ ಇಂಡಿಯಾದ ಗ್ರಾಹಕ ಸಾಧನಗಳ ಸಂಶೋಧನಾ ವ್ಯವಸ್ಥಾಪಕ ಉಪಾಸನ ಜೋಶಿ ಹೇಳಿದರು.
ಇದನ್ನೂ ಓದಿ : ಕೋವಿಡ್ ಎಮರ್ಜೆನ್ಸಿ ಅಂತ್ಯ: ವೈದ್ಯಕೀಯ ಸಾಧನ ಕಂಪನಿಗಳ ಮಾರಾಟ ಇಳಿಕೆ ಸಾಧ್ಯತೆ