ನವದೆಹಲಿ : ಜಾಗತಿಕವಾಗಿ ಫಾಸ್ಟ್ ಚಾರ್ಜಿಂಗ್ ಆಧರಿತ (10 ವ್ಯಾಟ್‌ಗಳಿಗಿಂತ ಹೆಚ್ಚು) ಸ್ಮಾರ್ಟ್‌ಫೋನ್‌ಗಳ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ. 2023 ರ ಮೊದಲ ತ್ರೈಮಾಸಿಕದಲ್ಲಿ (Q2) ಜಾಗತಿಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮಾರಾಟವಾದ ಸುಮಾರು ಶೇಕಡಾ 80 ರಷ್ಟು ಸ್ಮಾರ್ಟ್ಫೋನ್ಗಳು ಫಾಸ್ಟ್ ಚಾರ್ಜಿಂಗ್ ಫೋನ್ಗಳಾಗಿರುವುದು ವಿಶೇಷ. 2018 ರ ಮೊದಲ ತ್ರೈಮಾಸಿಕದಲ್ಲಿ ಫಾಸ್ಟ್ ಚಾರ್ಜಿಂಗ್ ಫೋನ್ಗಳ ಪಾಲು ಶೇಕಡಾ 29 ರಷ್ಟಿದ್ದರೆ, ಇದು 2022ರ ಮೊದಲ ತ್ರೈಮಾಸಿಕದ ಹೊತ್ತಿಗೆ ಶೇಕಡಾ 74ಕ್ಕೆ ಏರಿಕೆಯಾಗಿದೆ.
ಕೌಂಟರ್‌ಪಾಯಿಂಟ್ ರಿಸರ್ಚ್ ಪ್ರಕಾರ, ಹೆಚ್ಚುತ್ತಿರುವ ಸ್ಮಾರ್ಟ್‌ಫೋನ್ ಬಳಕೆ ಮತ್ತು ಹಾರ್ಡ್‌ವೇರ್ ತಂತ್ರಜ್ಞಾನದಲ್ಲಾಗುತ್ತಿರುವ ನಿರಂತರ ಪ್ರಗತಿಯಿಂದ ಫಾಸ್ಟ್ ಚಾರ್ಜಿಂಗ್ ಫೋನ್ಗಳ ಬಳಕೆ ಹೆಚ್ಚಾಗುತ್ತಿದೆ. ಚೀನೀ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ವಿಭಿನ್ನ ಬೆಲೆಯ ಶ್ರೇಣಿಗಳಲ್ಲಿ ಹೆಚ್ಚಿನ-ವ್ಯಾಟೇಜ್ ಚಾರ್ಜಿಂಗ್ ಅನ್ನು ಅಳವಡಿಸಿಕೊಳ್ಳುವ ಮೂಲಕ ಫಾಸ್ಟ್ ಚಾರ್ಜಿಂಗ್ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸುತ್ತಿವೆ.
ಚೈನೀಸ್ ಬ್ರ್ಯಾಂಡ್‌ಗಳು ಫಾಸ್ಟ್ ಚಾರ್ಜಿಂಗ್ ವೈಶಿಷ್ಟ್ಯದ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿವೆ. ಉದಾಹರಣೆಗೆ, Realme ಮತ್ತು Xiaomi 200W ಗಿಂತ ಹೆಚ್ಚಿನ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ಇದಲ್ಲದೆ Xiaomi ಮತ್ತು OPPO ಇತ್ತೀಚೆಗೆ ಪ್ರಭಾವಶಾಲಿ 300W ವೇಗದ ಚಾರ್ಜಿಂಗ್ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳನ್ನು ಹೊರತಂದಿವೆ. ಬಳಕೆದಾರರು ತಮ್ಮ ಫೋನ್‌ಗಳನ್ನು ಕೆಲವೇ ನಿಮಿಷಗಳಲ್ಲಿ ಚಾರ್ಜ್ ಮಾಡಲು ಅನುವಾಗುವಂತೆ ಈ ಬ್ರ್ಯಾಂಡ್‌ಗಳು ಅತ್ಯಂತ ವೇಗದ ಚಾರ್ಜಿಂಗ್ ವೈಶಿಷ್ಟ್ಯಗಳನ್ನು ಅಳವಡಿಸುತ್ತಿವೆ ಎಂದು ಹಿರಿಯ ವಿಶ್ಲೇಷಕ ಕರಣ್ ಚೌಹಾಣ್ ಹೇಳಿದ್ದಾರೆ. ಇದಲ್ಲದೆ, ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಕೈಗೆಟುಕುವಂತೆ ಮಾಡುವತ್ತ ಗಮನಹರಿಸುತ್ತಿವೆ ಎಂದು ವರದಿ ಉಲ್ಲೇಖಿಸಿದೆ.
ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ತಮ್ಮ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳಲ್ಲಿ ವೇಗದ ಚಾರ್ಜಿಂಗ್ ಅನ್ನು ವಿಶೇಷ ಸೌಲಭ್ಯವಾಗಿ ಅಳವಡಿಸುತ್ತಿವೆ. 200 ಡಾಲರ್ ಗಿಂತ ಹೆಚ್ಚಿನ ದರದ ಸ್ಮಾರ್ಟ್ಫೋನ್ಗಳಲ್ಲಿ ಸಾಮಾನ್ಯವಾಗಿ ಫಾಸ್ಟ್ ಚಾರ್ಜಿಂಗ್ ಇದ್ದೇ ಇರುತ್ತದೆ. ಆದರೆ ಕಡಿಮೆ ಬೆಲೆಯ ಫೋನ್ಗಳಲ್ಲೂ ಈ ವೈಶಿಷ್ಟ್ಯವನ್ನು ಅಳವಡಿಸಲು ಕಂಪನಿಗಳು ಯತ್ನಿಸುತ್ತಿವೆ ಎನ್ನುತ್ತಾರೆ ಚೌಹಾಣ್.
2023ರ ಪ್ರಥಮ ತ್ರೈಮಾಸಿಕದಲ್ಲಿ ಜಾಗತಿಕವಾಗಿ ಸ್ಮಾರ್ಟ್‌ಫೋನ್‌ಗಳ ಸರಾಸರಿ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ 34 ವ್ಯಾಟ್ ಆಗಿದೆ. ಇದು 2022ರ ಪ್ರಥಮ ತ್ರೈಮಾಸಿಕದಲ್ಲಿ 30 ವ್ಯಾಟ್ ಮತ್ತು 2018ರ ಪ್ರಥಮ ತ್ರೈಮಾಸಿಕದಲ್ಲಿ 18 ವ್ಯಾಟ್ ಆಗಿತ್ತು. 30W ಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಸಂಪೂರ್ಣ ಬ್ಯಾಟರಿ ಖಾಲಿಯಾಗಿರುವ ಸ್ಮಾರ್ಟ್‌ಫೋನ್ ಅನ್ನು ಸುಮಾರು ಒಂದು ಗಂಟೆಯಲ್ಲಿ ಪೂರ್ಣ ಚಾರ್ಜ್ ಮಾಡಬಹುದು. ಒಂದು ಗಂಟೆಯಲ್ಲಿ ಸ್ಮಾರ್ಟ್‌ಫೋನ್ ಅನ್ನು ಚಾರ್ಜ್ ಮಾಡುವುದು ಸ್ಮಾರ್ಟ್‌ಫೋನ್ ತಯಾರಕರಿಗೆ ಗ್ರಾಹಕರನ್ನು ಸೆಳೆಯುವ ಬಲವಾದ ಮಾರಾಟದ ಅಂಶವಾಗಿದೆ ಎಂದು ವರದಿ ಹೇಳಿದೆ.
ಚೀನೀ ಸ್ಮಾರ್ಟ್‌ಫೋನ್ ತಯಾರಕರು ವಿವಿಧ ಬೆಲೆ ಶ್ರೇಣಿಗಳಲ್ಲಿ ಹೆಚ್ಚಿನ ವ್ಯಾಟೇಜ್ ಚಾರ್ಜಿಂಗ್ ಅನ್ನು ಪರಿಚಯಿಸುವ ಮೂಲಕ ಈ ಟ್ರೆಂಡ್ ಅನ್ನು ಮುನ್ನಡೆಸುತ್ತಿದ್ದಾರೆ. ಮತ್ತೊಂದೆಡೆ, ಆ್ಯಪಲ್ ಮತ್ತು ಸ್ಯಾಮ್‌ಸಂಗ್‌ನಂತಹ ಬ್ರ್ಯಾಂಡ್‌ಗಳು ಹೆಚ್ಚಿನ ಸಾಮರ್ಥ್ಯದ ಚಾರ್ಜರ್‌ಗಳಿಗಿಂತ ಬ್ಯಾಟರಿ ಸುರಕ್ಷತೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಗೆ ಆದ್ಯತೆ ನೀಡಿವೆ.
ಇದನ್ನೂ ಓದಿ : ಸುದ್ದಿ ಬರೆಯುವ ಎಐ Google Genesis: ಇದೆಷ್ಟು ನಿಖರ..? ಇಲ್ಲಿದೆ ಮಾಹಿತಿ!