ಸ್ಯಾನ್ ಫ್ರಾನ್ಸಿಸ್ಕೊ: ಗ್ರಾಹಕರನ್ನು ಸೈಬರ್ ದಾಳಿಯಿಂದ ರಕ್ಷಿಸುವ ನಿಟ್ಟಿನಲ್ಲಿ ಗೂಗಲ್ ಕುಖ್ಯಾತ ಕ್ರಿಪ್ಟೊಬಾಟ್ ಮಾಲ್ವೇರ್ ಒಂದನ್ನು ಬ್ಲಾಕ್ ಮಾಡಿದೆ. ಸದ್ಯ ಬ್ಲಾಕ್ ಮಾಡಲಾದ ಮಾಲ್ವೇರ್ ಕಳೆದ ಒಂದು ವರ್ಷದಲ್ಲಿ ಲಕ್ಷಾಂತರ ಬಳಕೆದಾರರ ಬ್ರೌಸರ್ ಡೇಟಾ ಕಳವು ಮಾಡಿದೆ ಎಂದು ಗೂಗಲ್ ಹೇಳಿದೆ. ಕ್ರಿಪ್ಟೊಬಾಟ್ ಎಂಬುದು ಸಾಮಾನ್ಯವಾಗಿ ಒಂದು ಮಾಲ್ವೇರ್ ಆಗಿರುತ್ತದೆ ಹಾಗೂ ಇದನ್ನು ಇನ್ಫೊಸ್ಟೀಲರ್ (ಮಾಹಿತಿ ಕಳವು ಮಾಡುವ ಬಾಟ್) ಎಂದು ಕರೆಯಲಾಗುತ್ತದೆ. ಗ್ರಾಹಕರ ಕಂಪ್ಯೂಟರ್ನಲ್ಲಿರುವ ಸೂಕ್ಷ್ಮ ವೈಯಕ್ತಿಕ ಮಾಹಿತಿ ಕಳವು ಮಾಡುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.
ಕ್ರಿಪ್ಟೋ ಬಾಟ್ ಹೀಗೆ ತಾನು ಕದ್ದ ಡೇಟಾವನ್ನು ಮತ್ತೊಬ್ಬರಿಗೆ ಕಳುಹಿಸುತ್ತದೆ ಮತ್ತು ಅಂತಿಮವಾಗಿ ದತ್ತಾಂಶ ಉಲ್ಲಂಘನೆಯ ಕೆಲಸಗಳಿಗಾಗಿ ಇದನ್ನು ಸೈಬರ್ ವಂಚಕರಿಗೆ ಮಾರಲಾಗುತ್ತದೆ. ಇದರ ಜೊತೆಗೆ, ಗೂಗಲ್ ಕ್ರೋಮ್ ಮತ್ತು ಗೂಗಲ್ ಅರ್ಥ್ ಪ್ರೊನಂತಹ ಮಾರ್ಪಡಿಸಿದ ನಕಲಿ ಅಪ್ಲಿಕೇಶನ್‌ಗಳ ಮೂಲಕ ಕೂಡ ಮಾಲ್ವೇರ್ ಹರಡುತ್ತದೆ ಎಂದು ಗೂಗಲ್ ಹೇಳಿದೆ. ಮಾಲ್ವೇರ್ ಕಳೆದ ವರ್ಷ ಸುಮಾರು 6,70,000 ಕಂಪ್ಯೂಟರ್‌ಗಳಿಗೆ ದಾಳಿ ಮಾಡಿತ್ತು ಮತ್ತು ಗೂಗಲ್ ಕ್ರೋಮ್ ಬಳಕೆದಾರರ ಡೇಟಾ ಕದ್ದಿತ್ತು ಎಂದು ಗೂಗಲ್ ಹೇಳಿದೆ.
ಮಾಲ್ವೇರ್ ಇದೊಂದು ಪ್ರೋಗ್ರಾಂ ಅಥವಾ ಫೈಲ್ ಆಗಿದ್ದು ಅದು ಕಂಪ್ಯೂಟರ್, ನೆಟ್‌ವರ್ಕ್ ಅಥವಾ ಸರ್ವರ್‌ಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಲು ತಯಾರಿಸಲಾಗಿರುತ್ತದೆ. ಕಂಪ್ಯೂಟರ್ ವೈರಸ್ಗಳು, ವರ್ಮ್ಗಳು, ಟ್ರೋಜನ್ ಹಾರ್ಸ್ಗಳು, ರ್ಯಾನ್ಸಮ್ವೇರ್ ಮತ್ತು ಸ್ಪೈವೇರ್ ಸೇರಿವೆ. ಈ ದುರುದ್ದೇಶಪೂರಿತ ಪ್ರೊಗ್ರಾಮ್ಗಳು ಬಳಕೆದಾರರ ಸೂಕ್ಷ್ಮ ಡೇಟಾವನ್ನು ಕದಿಯುತ್ತವೆ ಅಥವಾ ಎನ್‌ಕ್ರಿಪ್ಟ್ ಮಾಡುತ್ತವೆ ಅಥವಾ ಅಳಿಸುತ್ತವೆ.
ಮಾಲ್ವೇರ್ ನೆಟ್‌ವರ್ಕ್‌ಗಳು ಮತ್ತು ಸಾಧನಗಳಲ್ಲಿ ಹರಡಿದಾಗ ಆ ಸಾಧನಗಳು ಸೂಕ್ತವಾಗಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು. ಮಾಲ್ವೇರ್ನ ಪ್ರಕಾರ ಮತ್ತು ಅದರ ಗುರಿಯನ್ನು ಅವಲಂಬಿಸಿ, ಈ ಹಾನಿಯು ಬಳಕೆದಾರರಿಗೆ ವಿಭಿನ್ನವಾಗಿ ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ಮಾಲ್ವೇರ್ ಪರಿಣಾಮವು ತುಲನಾತ್ಮಕವಾಗಿ ಸೌಮ್ಯವಾಗಿದ್ದು, ಅಷ್ಟೊಂದು ಹಾನಿಕರವಾಗಿರುವುದಿಲ್ಲ. ವಿಧಾನ ಹೇಗೇ ಇದ್ದರೂ ಎಲ್ಲ ರೀತಿಯ ಮಾಲ್ವೇರ್ಗಳನ್ನು ಹ್ಯಾಕರ್‌ನ ಲಾಭಕ್ಕಾಗಿ ತಯಾರಿಸಲಾಗಿರುತ್ತದೆ.
ಫಿಶಿಂಗ್ ದಾಳಿ ಮಾಡುವುದು ಮತ್ತೊಂದು ರೀತಿಯ ಮಾಲ್ವೇರ್ ದಾಳಿಯಾಗಿದೆ. ನೈಜವಾಗಿ ಕಾಣುವ ರೀತಿಯಲ್ಲಿ ಮಾರ್ಪಡಿಸಿದ ಇಮೇಲ್ಗಳ ಮೂಲಕ ವಂಚನೆಯ ಲಿಂಕ್ ಮತ್ತು ಅಟ್ಯಾಚಮೆಂಟ್ಗಳನ್ನು ಕಳುಹಿಸಲಾಗುತ್ತದೆ. ಇದನ್ನು ಅಮಾಯಕ ಬಳಕೆದಾರರು ಕ್ಲಿಕ್ ಮಾಡಿದಾಗ ಅವರ ಕಂಪ್ಯೂಟರ್ಗಳನ್ನು ಹ್ಯಾಕ್ ಮಾಡಲಾಗುತ್ತದೆ. ನಂತರ ಆ ಕಂಪ್ಯೂಟರ್ನಲ್ಲಿರುವ ಎಲ್ಲ ಮಾಹಿತಿಯನ್ನು ದೂರದಲ್ಲೆಲ್ಲೋ ಇರುವ ಸೈಬರ್ ವಂಚಕರ ಸರ್ವರ್‌ಗೆ ವರ್ಗಾಯಿಸಲಾಗುತ್ತದೆ.
ವೈರಸ್ ಎಂಬುದು ಅತ್ಯಂತ ಸಾಮಾನ್ಯವಾದ ಮಾಲ್‌ವೇರ್ ಆಗಿದ್ದು ಅದು ಸ್ವತಃ ತನ್ನನ್ನು ತಾನು ಹರಡುತ್ತದೆ ಮತ್ತು ಇತರ ಪ್ರೋಗ್ರಾಂಗಳು ಅಥವಾ ಫೈಲ್‌ಗಳಿಗೆ ಸೋಂಕು ತಗುಲಿಸುವ ಮೂಲಕ ಹರಡಬಹುದು. ವರ್ಮ್ ಎಂಬುದು ಹೋಸ್ಟ್ ಪ್ರೋಗ್ರಾಂ ಇಲ್ಲದೆ ಸ್ವಯಂ ನಕಲು ಮಾಡಬಹುದು ಮತ್ತು ಮಾಲ್ವೇರ್ ಬರೆದವರಿಂದ ಯಾವುದೇ ಹಸ್ತಕ್ಷೇಪವಿಲ್ಲದೇ ಸಾಮಾನ್ಯವಾಗಿ ಹರಡುತ್ತದೆ. ಟ್ರೋಜನ್ ಹಾರ್ಸ್ ಎಂಬುದು ಸಿಸ್ಟಮ್‌ಗೆ ಪ್ರವೇಶ ಪಡೆಯಲು ಕಾನೂನುಬದ್ಧ ಸಾಫ್ಟ್‌ವೇರ್ ಪ್ರೋಗ್ರಾಂನಂತೆ ಕಾಣಿಸಿಕೊಳ್ಳುವ ವೈರಸ್ ಆಗಿದೆ.
ಇದನ್ನೂ ಓದಿ : ಸುಡಾನ್: ಸಂಪೂರ್ಣ ಕದನವಿರಾಮಕ್ಕೆ ಒಪ್ಪದ ಸೇನಾ ಮುಖ್ಯಸ್ಥರು, ವಿನಾಶದತ್ತ ದೇಶ