ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಸುಮಾರು 36 ವರ್ಷಗಳ ಹಿಂದೆ ಮತ್ತೊಬ್ಬ ಸಾಫ್ಟವೇರ್ ಎಂಜಿನಿಯರ್ ಜೊತೆಗೂಡಿ ಪವರ್ ಪಾಯಿಂಟ್ ಸಾಫ್ಟ್ ವೇರ್ ಅನ್ನು ರಚಿಸಿದ್ದ ಡೆನ್ನಿಸ್ ಆಸ್ಟಿನ್ ಅವರು ಅಮೆರಿಕದಲ್ಲಿ ನಿಧನರಾಗಿದ್ದಾರೆ. 76 ವರ್ಷದ ಆಸ್ಟಿನ್ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
1987 ರಲ್ಲಿ ಫೋರ್ಥಾಟ್ ಹೆಸರಿನ ಸಾಫ್ಟ್ವೇರ್ ಸಂಸ್ಥೆ ಬಿಡುಗಡೆ ಮಾಡಿದ್ದ ಪವರ್ ಪಾಯಿಂಟ್ ಸಾಫ್ಟ್ವೇರ್ ಓವರ್ ಹೆಡ್ ಪ್ರೊಜೆಕ್ಟರ್ಗಳಿಗೆ ಪರ್ಯಾಯವಾಗಿ ಸ್ಥಾನ ಗಳಿಸಿತ್ತು. ಸ್ಲೈಡ್ಗಳನ್ನು ತಯಾರಿಸುವ ಕ್ಲಿಷ್ಟಕರವಾದ ಕ್ರಿಯೆಯನ್ನು ಇದು ಕಡಿಮೆ ಮಾಡಿತ್ತು. ಕಂಪನಿಯು 1987 ರಲ್ಲಿ ಪವರ್ ಪಾಯಿಂಟ್ ಸಾಫ್ಟ್ವೇರ್ ಅನ್ನು ಬಿಡುಗಡೆ ಮಾಡಿತ್ತು. ಇದಾಗಿ ಕೆಲ ತಿಂಗಳುಗಳ ನಂತರ ಮೈಕ್ರೋಸಾಫ್ಟ್ ಕಂಪನಿಯನ್ನು $ 14 ಮಿಲಿಯನ್ಗೆ ಖರೀದಿಸಿತ್ತು.
1993 ರ ಹೊತ್ತಿಗೆ ಪವರ್ ಪಾಯಿಂಟ್ $ 100 ಮಿಲಿಯನ್ ಡಾಲರ್ಗಿಂತ ಹೆಚ್ಚು ಆದಾಯ ಗಳಿಸುವ ಕಂಪನಿಯಾಗಿತ್ತು. ನಂತರ ಮೈಕ್ರೊಸಾಫ್ಟ್ ಪವರ್ ಪಾಯಿಂಟ್ ಅನ್ನು ತನ್ನ ಎಂಎಸ್ ವರ್ಡ್ ಸೇರಿದಂತೆ ಆಫೀಸ್ ಉತ್ಪನ್ನಗಳ ಸೂಟ್ ನಲ್ಲಿ ಸಂಯೋಜಿಸಿತು. ಆಸ್ಟಿನ್ ಅವರು 1985 ರಿಂದ 1996 ರವರೆಗೆ ಪವರ್ ಪಾಯಿಂಟ್ನ ಮೂಲ ಡೆವಲಪರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಆಸ್ಟಿನ್ ಮೇ 28, 1947 ರಂದು ಪಿಟ್ಸ್ ಬರ್ಗ್ ನಲ್ಲಿ ಜನಿಸಿದರು. ಅವರು ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದರು. 1984 ರಲ್ಲಿ ಬ್ಯಾಟರಿ ಚಾಲಿತ ಲ್ಯಾಪ್ಟಾಪ್ಗಳ ಬಗ್ಗೆ ಕೆಲಸ ಮಾಡುವ ಸ್ಟಾರ್ಟ್ ಅಪ್ ನಿಂದ ವಜಾಗೊಳಿಸಲ್ಪಟ್ಟ ನಂತರ, ಆಸ್ಟಿನ್ ಅವರನ್ನು ಫೋರ್ ಥಾಟ್ ನೇಮಿಸಿಕೊಂಡಿತು. ಫೋರ್ ಥಾಟ್ ಇದನ್ನು ಇಬ್ಬರು ಮಾಜಿ ಆ್ಯಪಲ್ ಉದ್ಯೋಗಿಗಳು ಸ್ಥಾಪಿಸಿದ್ದರು.
ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಅನ್ನು ಸ್ವಾಧೀನಪಡಿಸಿಕೊಂಡ ನಂತರವೂ ಆಸ್ಟಿನ್ ಪವರ್ ಪಾಯಿಂಟ್ ಸಾಫ್ಟ್ವೇರ್ ಅಭಿವೃದ್ಧಿಪಡಿಸುವುದನ್ನು ಮುಂದುವರೆಸಿದ್ದರು. ಅವರು 1996 ರಲ್ಲಿ ನಿವೃತ್ತರಾದರು. ವರದಿಯ ಪ್ರಕಾರ, ಈಗ ದಿನಕ್ಕೆ ಪವರ್ ಪಾಯಿಂಟ್ ಬಳಸಿ 30 ದಶಲಕ್ಷಕ್ಕೂ ಹೆಚ್ಚು ಪ್ರಸೆಂಟೇಶನ್ಗಳನ್ನು ಜಗತ್ತಿನಲ್ಲಿ ರಚಿಸಲಾಗುತ್ತಿದೆ.
MS PowerPoint ಎಂಬುದು Microsoft Office ಸೂಟ್ ನಲ್ಲಿ ಸೇರಿಸಲಾದ ಒಂದು ಪ್ರೋಗ್ರಾಂ ಆಗಿದೆ. ವೈಯಕ್ತಿಕ ಮತ್ತು ವೃತ್ತಿಪರ ಉದ್ದೇಶಗಳಿಗಾಗಿ ಪ್ರಸೆಂಟೇಶನ್ಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಪವರ್ ಪಾಯಿಂಟ್ (ಪಿಪಿಟಿ) ಇದು ಶಕ್ತಿಯುತವಾದ, ಬಳಸಲು ಸುಲಭವಾದ ಪ್ರಸೆಂಟೇಶನ್ ಗ್ರಾಫಿಕ್ಸ್ ಸಾಫ್ಟ್ವೇರ್ ಪ್ರೋಗ್ರಾಂ ಆಗಿದ್ದು, ಇದು ವೃತ್ತಿಪರವಾಗಿ ಕಾಣುವ ಎಲೆಕ್ಟ್ರಾನಿಕ್ ಸ್ಲೈಡ್ ಶೋಗಳನ್ನು ರಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಕರಗಲಿವೆ ಹಿಮನದಿಗಳು, ಏರಿಕೆಯಾಗಲಿದೆ ಸಮುದ್ರ ಮಟ್ಟ: ವಿಶ್ವಕ್ಕೆ ವಿಜ್ಞಾನಿಗಳ ಎಚ್ಚರಿಕೆ!