ಪ್ಯಾರಿಸ್ : ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ನಿಷ್ಕ್ರಿಯಗೊಂಡ (ಇಎಸ್‌ಎ) ಏಯೋಲಸ್ ಉಪಗ್ರಹವನ್ನು ಮರಳಿ ಭೂಮಿಯ ಮೇಲೆ ಯಶಸ್ವಿಯಾಗಿ ಇಳಿಸಲಾಗಿದೆ. ಬಾಹ್ಯಾಕಾಶದಲ್ಲಿ ಉಪಗ್ರಹಗಳ ಅವಶೇಷ ಸಂಗ್ರಹವಾಗುವುದನ್ನು ತಪ್ಪಿಸಲು ಇದನ್ನು ಭೂಮಿಗೆ ಮರಳಿಸಲಾಗಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಸತ್ತ ಅಥವಾ ನಿಷ್ಕ್ರಿಯಗೊಂಡ ಉಪಗ್ರಹವೊಂದನ್ನು ಮರಳಿ ಭೂಮಿಗೆ ಇಳಿಸಲಾಗಿದೆ.
ಇಎಸ್‌ಎಯ ವಿಂಡ್ ಮಿಷನ್ ಎಂದೂ ಕರೆಯಲ್ಪಡುವ ಏಯೋಲಸ್ ಬಾಹ್ಯಾಕಾಶ ನೌಕೆಯ ಇಂಧನ ಖಾಲಿಯಾದ ನಂತರ ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಲು ಇಎಸ್‌ಎಯಲ್ಲಿನ ಮಿಷನ್ ಅಧಿಕಾರಿಗಳ ತಂಡ ಮಾರ್ಗದರ್ಶನ ನೀಡಿತು. ಉಪಗ್ರಹ ಜುಲೈ 28 ರಂದು ಅಂಟಾರ್ಟಿಕಾದಲ್ಲಿ ಇಳಿದಿದೆ. ಏಯೋಲಸ್ ಜುಲೈ 28 ರಂದು ಅಂಟಾರ್ಟಿಕಾದ ಮೇಲೆ ಸುಮಾರು 21:00 CEST (12:30am IST) ಸಮಯದಲ್ಲಿ ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದೆ ಎಂದು ಯುಎಸ್ ಬಾಹ್ಯಾಕಾಶ ಕಮಾಂಡ್ ದೃಢಪಡಿಸಿದೆ ಎಂದು ESA Aeolus ಮಿಷನ್ ಟ್ವಿಟ್ಟರ್ನಲ್ಲಿ ತಿಳಿಸಲಾಗಿದೆ.
ಭೂಮಿಯ ಗಾಳಿಯನ್ನು ಮೇಲ್ವಿಚಾರಣೆ ಮಾಡಲು ಆಗಸ್ಟ್ 2018 ರಲ್ಲಿ ಇದನ್ನು ಉಡಾವಣೆ ಮಾಡಲಾಗಿತ್ತು. 1,360 ಕಿಲೋಗ್ರಾಂಗಳಷ್ಟು ತೂಕದ ಉಪಗ್ರಹವು ವಿಜ್ಞಾನಿಗಳ ನಿರೀಕ್ಷೆಯನ್ನೂ ಮೀರಿ ಕೆಲಸ ಮಾಡಿದೆ ಮತ್ತು ಕಕ್ಷೆಯಲ್ಲಿ ತನ್ನ ಯೋಜಿತ ಕಾಲಚಕ್ರವನ್ನು ಮೀರಿದೆ. ಇದು ಇಎಸ್‌ಎ ಯ ಅತ್ಯಂತ ಯಶಸ್ವಿ ಭೂ ವೀಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಪ್ರಶಂಸಿಸಲಾಗಿದೆ.
ಏಯೋಲಸ್ ಕಕ್ಷೆಯನ್ನು 320 ಕಿಮೀ ಎತ್ತರದಿಂದ ಕೇವಲ 120 ಕಿಲೋಮೀಟರ್‌ಗೆ ಇಳಿಸಿ ಭೂಮಿಯ ವಾತಾವರಣಕ್ಕೆ ಮರುಪ್ರವೇಶಿಸುವಂತೆ ಮಾಡಲಾಯಿತು ಮತ್ತು ನಂತರ ಉಪಗ್ರಹ ಉರಿದು ಹೋಯಿತು. ಏಯೋಲಸ್ ಉರಿದು ಹೋದ ನಂತರ ಅದರ ಯಾವುದೇ ಅವಶೇಷಗಳು ಮೊದಲೇ ನಿರ್ಧರಿಸಿದ ಸಮುದ್ರದ ಭಾಗವನ್ನು ಹೊರತುಪಡಿಸಿ ಮತ್ತೆಲ್ಲಿಯೂ ಬೀಳದಂತೆ ಅತ್ಯಂತ ಕುಶಲವಾದ ಹಾಗೂ ವಿಶಿಷ್ಟವಾದ ಕಾರ್ಯಾಚರಣೆಯನ್ನು ನಡೆಸಲಾಯಿತು.
ಇಂಧನ ಖಾಲಿಯಾದ ನಂತರ ಯಾವುದೇ ಹಸ್ತಕ್ಷೇಪ ಮಾಡದಿದ್ದರೆ ಏಯೋಲಸ್ ಮುಂದಿನ ಕೆಲ ವಾರಗಳಲ್ಲಿ ಸಹಜವಾಗಿಯೇ ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತಿತ್ತು. ಆದರೆ ಇದು ಯಾವ ಪ್ರದೇಶದಲ್ಲಿ ಭೂಮಿಯ ವಾತಾವರಣವನ್ನು ಪ್ರವೇಶಿಸುತ್ತಿತ್ತು ಎಂಬುದರ ಮೇಲೆ ನಿಯಂತ್ರಣವಿರುತ್ತಿರಲಿಲ್ಲ. ಹೀಗಾಗಿ ಉಪಗ್ರಹವು ಎಲ್ಲಿ ಬೀಳಬೇಕೆಂಬುದರ ಬಗ್ಗೆ ಮಾರ್ಗದರ್ಶನ ಮಾಡಿ ಕಾರ್ಯಾಚರಣೆ ನಡೆಸಲಾಯಿತು.
ಜರ್ಮನಿಯ ಇಎಸ್‌ಎ ಯ ESOC ಮಿಷನ್ ನಿಯಂತ್ರಣ ಕೇಂದ್ರದಲ್ಲಿನ ಬಾಹ್ಯಾಕಾಶ ನೌಕೆಯ ಇಂಜಿನಿಯರ್‌ಗಳು, ಫ್ಲೈಟ್ ಡೈನಾಮಿಕ್ಸ್ ತಜ್ಞರು ಮತ್ತು ಬಾಹ್ಯಾಕಾಶ ಶಿಲಾಖಂಡರಾಶಿಗಳ ತಜ್ಞರ ತಂಡವು ಉಪಗ್ರಹದಲ್ಲಿ ಉಳಿದ ಇಂಧನವನ್ನು ಬಳಸಿ ಏಯೋಲಸ್ ಅನ್ನು ಕೆಳಗಿನ ಕಕ್ಷೆಗೆ ಇಳಿಸಿದರು ಮತ್ತು ಅದು ನಿರ್ದಿಷ್ಟ ಪ್ರದೇಶದಲ್ಲಿಯೇ ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸುವಂತೆ ಸನ್ನಿವೇಶಗಳನ್ನು ಸೃಷ್ಟಿಸಿದರು.
ವಾರಕ್ಕೊಮ್ಮೆಯಾದರೂ ಯಾವುದೋ ಉಪಗ್ರಹ ಮತ್ತು ರಾಕೆಟ್ ಭಾಗಗಳು ಭೂಮಿಗೆ ಬೀಳುತ್ತಿರುತ್ತವೆ. ಆದರೆ ಇವುಗಳ ಯಾವುದೇ ಬಿಡಿಭಾಗಗಳು ಭೂಮಿಯ ಮೇಲಿನ ಜೀವಿಗಳಿಗೆ ಯಾವುದೇ ಹಾನಿ ಮಾಡಿದ್ದು ಅಪರೂಪ. ಹಾಗಾಗಿ ಏಯೋಲಸ್ ಕೂಡ ಯಾವುದೇ ಹಾನಿ ಮಾಡುವ ಸಾಧ್ಯತೆ ಇರಲಿಲ್ಲ. ಆದರೆ ಉಪಗ್ರಹದ ಅವಶೇಷಗಳು ಬಾಹ್ಯಾಕಾಶದಲ್ಲಿ ಉಳಿಯುವುದನ್ನು ತಪ್ಪಿಸಲು ಅದನ್ನು ಭೂಮಿಗೆ ಮರಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಥ ಮತ್ತಷ್ಟು ಸತ್ತ ಉಪಗ್ರಹಗಳನ್ನು ಭೂಮಿಗೆ ಸುರಕ್ಷಿತವಾಗಿ ಮರಳಿ ತರುವ ಬಗ್ಗೆ ಪ್ರಯತ್ನಗಳು ನಡೆಯಲಿವೆ. ಏಯೋಲಸ್ ಮಿಷನ್ ಹವಾಮಾನ ಸಂಶೋಧನೆಗೆ ಮಹತ್ತರ ಕೊಡುಗೆ ನೀಡಿದ್ದು ಮಾತ್ರವಲ್ಲದೆ, ಹವಾಮಾನ ಮುನ್ಸೂಚನೆಗಾಗಿ ಇದು ಸಾಕಷ್ಟು ಉಪಯುಕ್ತ ಮಾಹಿತಿಗಳನ್ನು ನೀಡಿದೆ.
ಇದನ್ನೂ ಓದಿ : S Jaishankar: ತಂತ್ರಜ್ಞಾನದ ವ್ಯಾಪಾರ ರಾಜಕೀಯವನ್ನೂ ಒಳಗೊಂಡಿದೆ- ವಿದೇಶಾಂಗ ಸಚಿವ ಎಸ್.ಜೈಶಂಕರ್