ಯುಎಇ: ಬ್ರಹ್ಮಾಂಡದ ಮೂಲ ದತ್ತಾಂಶವನ್ನು ಸಂಗ್ರಹಿಸಲು ಮಂಗಳ ಮತ್ತು ಗುರುಗ್ರಹಗಳ ನಡುವಿನ ಕ್ಷುದ್ರಗ್ರಹಕ್ಕೆ ನೌಕೆ ಕಳುಹಿಸುವ ಯೋಜನೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ - ಯುಎಇ ಮಂಗಳವಾರ ಘೋಷಿಸಿದೆ. ತೈಲ ಶ್ರೀಮಂತ ಒಕ್ಕೂಟದ ಇತ್ತೀಚಿನ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆ ಇದಾಗಿದೆ.
ನೌಕೆ ಯಶಸ್ವಿಯಾಗಿ ಇಳಿಯುವಿಕೆಯ ಸಾಧನೆಯೊಂದಿಗೆ ಯುಎಇ ಯುರೋಪಿಯನ್ ಯೂನಿಯನ್, ಜಪಾನ್ ಹಾಗೂ ಅಮೆರಿಕ ಸಾಲಿಗೆ ಸೇರಲಿದೆ. ಕ್ಷುದ್ರಗ್ರಹದ ತನಿಖೆಗಾಗಿ ನೌಕೆ ಅಲ್ಲಿ ಉಳಿಯಲಿದ್ದು, ಅದರಲ್ಲಿನ ಬ್ಯಾಟರಿಗಳನ್ನು ಚಾರ್ಜ್ ಮಾಡಿಕೊಂಡು ಕ್ಷುದ್ರಗ್ರಹದ ಬಗ್ಗೆ ಭೂಮಿಗೆ ಮಾಹಿತಿ ರವಾನಿಸುತ್ತದೆ.
ಯೋಜನೆಯು 2028ಕ್ಕೆ ಉಡಾವಣೆಯೊಂದಿಗೆ 2033ರಲ್ಲಿ ಲ್ಯಾಂಡಿಂಗ್ ಮಾಡುವ ಗುರಿಯನ್ನು ಹೊಂದಿದೆ. ಐದು ವರ್ಷಗಳ ಪ್ರಯಾಣದಲ್ಲಿ ಬಾಹ್ಯಾಕಾಶ ನೌಕೆ ಸುಮಾರು 3.6 ಬಿಲಿಯನ್ ಕಿಲೋಮೀಟರ್ (2.2 ಬಿಲಿಯನ್ ಮೈಲಿಗಳು) ಚಲಿಸುತ್ತದೆ. ಮೊದಲು ಶುಕ್ರನ ಸುತ್ತಲೂ ಮತ್ತು ನಂತರ ಭೂಮಿಯ ಸುತ್ತಲೂ 560 ದಶಲಕ್ಷ ಕಿಲೋಮೀಟರ್ (350 ದಶಲಕ್ಷ ಮೈಲಿ) ದೂರದಲ್ಲಿರುವ ಕ್ಷುದ್ರಗ್ರಹವನ್ನು ತಲುಪಲು ಸಾಕಷ್ಟು ವೇಗ ಸಂಗ್ರಹಿಸಬೇಕಾಗುತ್ತದೆ.
ಅರಬ್ ಸಂಸ್ಥಾನ ಯಾವ ಡೇಟಾವನ್ನು ಸಂಗ್ರಹಿಸುತ್ತದೆ ಎಂಬುದು ಇನ್ನೂ ಚರ್ಚೆಯಲ್ಲಿದೆ. ಆದರೆ, ಮಿಷನ್ ಹಿಂದಿನ ಸವಾಲುಗಳಿಗಿಂತ ದೊಡ್ಡ ಸವಾಲಾಗಿರುತ್ತದೆ. ಬಾಹ್ಯಾಕಾಶ ನೌಕೆ ಸೂರ್ಯನ ಬಳಿ ಮತ್ತು ಅದಕ್ಕಿಂತಲೂ ದೂರ ಪ್ರಯಾಣಿಸುತ್ತದೆ. ಈ ಹೊಸ ಬಾಹ್ಯಾಕಾಶ ಯಾನವು ನಮ್ಮ ವಿಜ್ಞಾನ, ತಂತ್ರಜ್ಞಾನ ಸಾಮರ್ಥ್ಯಗಳನ್ನು ದೇಶದೊಳಗೆ ಪರಿವರ್ತಿಸಲು ಪ್ರೇರಕವಾಗಿದೆ ಎಂದು ಯುಎಇ ಸ್ಪೇಸ್ ಏಜೆನ್ಸಿಯ ಅಧ್ಯಕ್ಷೆ ಸಾರಾ ಅಲ್-ಅಮಿರಿ ಹೇಳಿದ್ದಾರೆ.