ಬಾಹ್ಯಾಕಾಶ ವಿಜ್ಞಾನ ಅತ್ಯಂತ ಸೂಜಿಗ. ಅದು ಸಾಮಾನ್ಯ ಜನರಿಗೆ ಮಾತ್ರವಲ್ಲ, ವಿಜ್ಞಾನಿಗಳಿಗೂ ಕುತೂಹಲದ ಕಣಜ. ಕ್ಷಣಕ್ಕೊಂದು ಅಪರೂಪದ ವಿದ್ಯಮಾನ ಆಕಾಶದಲ್ಲಿ ಅಥವಾ ಬ್ರಹ್ಮಾಂಡದಲ್ಲಿ ನಡೆಯುತ್ತಲೇ ಇರುತ್ತವೆ. ಆದರೆ ಭೂಮಿಯಲ್ಲಿನ ಜನರಿಗೆ ಅಥವಾ ವಿಜ್ಞಾನಿಗಳಿಗೆ ಗೊತ್ತಾಗುವುದು ಅಪರೂಪದಲ್ಲಿ ಅಪರೂಪವೇ ಸರಿ.
ಈಗ ಅಂಥದ್ದೊಂದು ಅತ್ಯಪರೂಪದ ವಿದ್ಯಮಾನ ಕಣ್ಣಿಗೆ ಬಿದ್ದಿದೆ. ಬೃಹತ್ ನಕ್ಷತ್ರವೊಂದು ಸ್ಫೋಟಗೊಳ್ಳುವುದನ್ನು ಟೆಲಿಸ್ಕೋಪ್ಗಳ ಮೂಲಕ ನೋಡಿರುವುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ನಕ್ಷತ್ರ ಸ್ಫೋಟಗೊಳ್ಳುವುದೆಂದರೆ ಅದು ಸಾವನ್ನಪ್ಪುವುದು ಎಂದರ್ಥ. ಮೇಲ್ನೋಟಕ್ಕೆ ಇದು ಸಾಮಾನ್ಯ ಎಂದು ನಾವು ಅಂದುಕೊಳ್ಳಬಹುದು. ಆಗಸದಲ್ಲಿ ಸಾಕಷ್ಟು ನಕ್ಷತ್ರಗಳಿವೆ. ಅವುಗಳು ಸ್ಫೋಟಗೊಳ್ಳುವುದು ಅತ್ಯಂತ ಸರ್ವೇ ಸಾಮಾನ್ಯ ಎಂದೆನಿಸಬಹುದು.
ಈ ಕುರಿತು ನಿಮ್ಮ ಕುತೂಹಲ ಹೆಚ್ಚಾಗಬೇಕೆಂದರೆ ಒಂದು ನಕ್ಷತ್ರದ ಆಯಸ್ಸು ಎಷ್ಟು ಎಂದು ತಿಳಿದುಕೊಂಡರೆ ಸಾಕು. ಹೌದು, ಕೆಲವೊಂದು ನಕ್ಷತ್ರಗಳು 1 ಬಿಲಿಯನ್ ವರ್ಷಗಳಷ್ಟು ಬದುಕಿದರೆ, ಇನ್ನೂ ಕೆಲವು ನಕ್ಷತ್ರಗಳು 10 ಬಿಲಿಯನ್ ವರ್ಷಗಳಷ್ಟು ಬದುಕಿರುತ್ತವೆ. ಇನ್ನೂ ಕೆಲವು 13.8 ಬಿಲಿಯನ್ ವರ್ಷಗಳು ಬದುಕುತ್ತವೆ ಎಂಬುದು ವಿಜ್ಞಾನಿಗಳ ಅಂದಾಜು.
ಅಂದರೆ ಈಗ ಕೆಲವು ಮಿಲಿಯನ್ ವರ್ಷಗಳ ಕಾಲ ಜೀವಿಸಿದ್ದ ನಕ್ಷತ್ರ ಸಾವನ್ನಪ್ಪುತ್ತಿದೆ ಅರ್ಥಾತ್ ಸ್ಫೋಟಗೊಳ್ಳುತ್ತಿದೆ. ಆ ಸ್ಫೋಟವನ್ನು ಭೂಮಿಯ ಮೇಲಿರುವ ಟೆಲಿಸ್ಕೋಪ್ಗಳಿಂದ ನೋಡಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.
ಸ್ಫೋಟಗೊಂಡ ನಕ್ಷತ್ರ ಇರುವ ದೂರವೆಷ್ಟು ಗೊತ್ತಾ?
ವಿಜ್ಞಾನಿಗಳು ಹೇಳುವಂತೆ, ಈಗ ಸ್ಫೋಟಗೊಂಡಿರುವ ಎನ್ಜಿಸಿ 5731(NGC 5731) ಎಂಬ ಹೆಸರಿನ ಗೆಲಾಕ್ಸಿಯಲ್ಲಿದೆ. ಈ ಗೆಲಾಕ್ಸಿ ಇರುವುದು ಭೂಮಿಯಿಂದ ಸುಮಾರು 120 ಮಿಲಿಯನ್ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ.
ಸಾಮಾನ್ಯವಾಗಿ ಬೆಳಕು ಒಂದು ಸೆಕೆಂಡ್ಗೆ ಸರಾಸರಿ 3 ಲಕ್ಷ ಕಿಲೋಮೀಟರ್ಗಳ ದೂರ ಕ್ರಮಿಸುವ ಸಾಮರ್ಥ್ಯವಿರುತ್ತದೆ. ಒಂದು ವರ್ಷಕ್ಕೆ 9.46 ಟ್ರಿಲಿಯನ್ ಕಿಲೋಮೀಟರ್ಗಳಷ್ಟು ಬೆಳಕು ಚಲಿಸುತ್ತದೆ. ಇದನ್ನೇ ಒಂದು 'ಬೆಳಕಿನ ವರ್ಷ' ಎಂದು ಕರೆಯಲಾಗುತ್ತದೆ. ಇಂತಹ 120 ಮಿಲಿಯನ್ ಬೆಳಕಿನ ವರ್ಷಗಳನ್ನು ಒಟ್ಟುಗೂಡಿಸಿದರೆ, ಎಷ್ಟು ದೂರ ಬರುತ್ತದೆಯೋ ಅಷ್ಟು ದೂರದಲ್ಲಿ ಎನ್ಜಿಸಿ 5731 ಗೆಲಾಕ್ಸಿಯಿದೆ. ಅದೇ ಗೆಲಾಕ್ಸಿಯಲ್ಲಿ ಸ್ಫೋಟಗೊಂಡಿರುವ ನಕ್ಷತ್ರವಿದು.
ಸೂರ್ಯನಿಗಿಂತ 10 ಪಟ್ಟು ದೊಡ್ಡದಾಗಿತ್ತು!
ನಮ್ಮದೇ ಆದ ಕ್ಷೀರಪಥ ಗೆಲಾಕ್ಸಿಯಲ್ಲಿ ಸೂರ್ಯನಿಗಿಂತ ಎಷ್ಟೋ ಸಾವಿರ ಪಟ್ಟು ದೊಡ್ಡದಾದ ನಕ್ಷತ್ರಗಳಿವೆ. ವಿಜ್ಞಾನಿಗಳ ಪ್ರಕಾರ, ಎನ್ಜಿಸಿ 5731 ಗೆಲಾಕ್ಸಿಯಲ್ಲಿದ್ದ ನಕ್ಷತ್ರ ಸ್ಫೋಟಗೊಳ್ಳುವ ಮೊದಲು ಸೂರ್ಯನಿಗಿಂತ ಹತ್ತು ಪಟ್ಟು ದೊಡ್ಡದಾಗಿತ್ತು. ಅದು ನಕ್ಷತ್ರದ ಕೊನೆಯ ಹಂತವಾದ ಕೆಂಪು ಬೃಹತ್ ದೈತ್ಯವಾಗಿ (Red Super Giant) ಸ್ಫೋಟಗೊಂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ನಕ್ಷತ್ರದ ಸಾವು ಅಧ್ಯಯನಕ್ಕೆ ಪೂರಕ:
ಈ ನಕ್ಷತ್ರದ ಸ್ಫೋಟದ ಬಗ್ಗೆ ದಿ ಆಸ್ಟ್ರೋಫಿಸಿಕಲ್ ಜರ್ನಲ್ ಎಂಬ ಪತ್ರಿಕೆಯಲ್ಲಿ ಸವಿವರ ಪ್ರಕಟವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ರಿಸರ್ಚ್ ಫೆಲೋ ಆಗಿರುವ, ಈ ನಕ್ಷತ್ರದ ಬಗ್ಗೆ ಅಧ್ಯಯನ ಮಾಡಿರುವ ಲೇಖಕ ವೈನ್ ಜಾಕೋಬ್ಸನ್ ಮತ್ತು ಗ್ಯಾಲನ್ ನಕ್ಷತ್ರಗಳು ಸಾಯುವ ಮುನ್ನ ಅವುಗಳಲ್ಲಿನ ಸ್ಥಿತಿ ಹೇಗಿರುತ್ತದೆ ಎಂಬುದನ್ನು ತಿಳಿಯಲು ಇದು ಸಹಕಾರಿಯಾಗಿದೆ ಎಂದಿದ್ದಾರೆ.
ಇದನ್ನೂ ಓದಿ: Walking Fish: 22 ವರ್ಷಗಳ ನಂತರ ಪತ್ತೆಯಾಯ್ತು ನಡೆದಾಡುವ ಮೀನು!