ನವದೆಹಲಿ: ಗೂಗಲ್ ಪೇ, ಇ-ಮೇಲ್, ಬ್ಯಾಂಕ್ ಖಾತೆ ಸೇರಿದಂತೆ ಹಲವುಗಳಿಗೆ ಪಾಸ್‌ವರ್ಡ್ ಬೇಕೇ ಬೇಕು. ಅದನ್ನು ಸಾಧ್ಯವಾದಷ್ಟು ಗೌಪ್ಯವಾಗಿಯೂ ಇಡುತ್ತೇವೆ. ಆದರೆ, ಕನಿಷ್ಠ 6 ಸಂಖ್ಯೆಗಳಿರುವ ಪಾಸ್ವರ್ಡನ್ನು ನಾವು ಅತಿ ಸರಳವಾಗಿ ಬಳಸುತ್ತೇವೆ ಎಂಬುದು ನಿಮಗೆ ಗೊತ್ತಾ. ಅದನ್ನು ಯಾರು ಬೇಕಾದರೂ ಹೈಜಾಕ್ ಮಾಡುವ ಸಾಧ್ಯತೆಯೂ ಇದೆ.
ಈ ವರ್ಷ ಅಂದರೆ, 2023 ರಲ್ಲಿ ಭಾರತೀಯರು ಸೇರಿದಂತೆ ವಿಶ್ವದಲ್ಲಿ ಅತಿ ಹೆಚ್ಚಾಗಿ ಬಳಕೆಯಾದ ಪಾಸ್‌ವರ್ಡ್ '123456'. ಇದನ್ನು ಜನರು ಅತಿ ಹೆಚ್ಚಾಗಿ ಬಳಕೆ ಮಾಡಿದ್ದಾರೆ ಎಂದು ಪಾಸ್‌ವರ್ಡ್ ನಿರ್ವಹಣಾ ಸಂಸ್ಥೆಯಾದ ನಾರ್ಡ್ಪಾಸ್ ಹೇಳಿದೆ. ಇದು ಅತಿ ದುರ್ಬಲವಾದ ಪಾಸ್‌ವರ್ಡ್ ಆಗಿದ್ದರೂ ಕೂಡ ಜನರು ಬಳಕೆ ಮಾಡಿದ್ದಾರೆ ಎಂದು ಸಂಸ್ಥೆಯ ವರದಿ ಹೇಳಿದೆ.
ಪಾಸ್ವರ್ಡ್ಗೆ ದೇಶದ ಹೆಸರೂ ಬಳಕೆ: ನಿರ್ದಿಷ್ಟ ಸ್ಥಳದ ಹೆಸರನ್ನು ಪಾಸ್‌ವರ್ಡ್ ಆಗಿಯೂ ಬಳಸಿಕೊಂಡಿದ್ದು ಕಂಡುಬಂದಿವೆ. ಜಾಗತಿಕ ಇಂಟರ್ನೆಟ್ ಬಳಕೆದಾರರು ದೇಶ ಅಥವಾ ನಗರದ ಹೆಸರನ್ನು ತಮ್ಮ ಪಾಸ್ವರ್ಡ್ಗಳಿಗೆ ಇಟ್ಟಿದ್ದಾರೆ. ಇದಕ್ಕೆ ಭಾರತವು ಹೊರತಾಗಿಲ್ಲ. ನಮ್ಮಲ್ಲಿ 'India@123' ಎಂಬ ಪದವನ್ನು ಅತಿ ಹೆಚ್ಚಾಗಿ ಬಳಕೆ ಮಾಡಿಕೊಂಡಿದ್ದು, ಮೊದಲ ಸ್ಥಾನದಲ್ಲಿದೆ.
ಇದರೊಂದಿಗೆ 'ಅಡ್ಮಿನ್' ಎಂಬ ಪದವನ್ನು ಪಾಸ್‌ವರ್ಡ್ ಆಗಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಇದನ್ನು ಬದಲಾವಣೆ ಮಾಡಲು ಜನರು ಬಯಸುವುದಿಲ್ಲ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಇದು ಅತ್ಯಂತ ಸಾಮಾನ್ಯ ಪಾಸ್‌ವರ್ಡ್ ಆಗಿದೆ ಎಂಬುದುನ್ನು ವರದಿ ಪತ್ತೆ ಮಾಡಿದೆ.
'PASSWORD ಪದವೇ ಪಾಸ್‌ವರ್ಡ್ : ಕಳೆದ ವರ್ಷ 'PASSWORD' ಪದವೇ ಅತಿ ಹೆಚ್ಚಾಗಿ ಬಳಸಿದ ಗುಪ್ತ ಪದವಾಗಿದೆ. ಭಾರತದಲ್ಲಿ ಅದನ್ನು 'PASSWORD', 'PASS@123', 'PASSWORD@123' ಎಂದು ಬಳಕೆ ಮಾಡಲಾಗಿತ್ತು. ಈಗಲೂ ಅದು ಹಲವರ ಪಾಸ್‌ವರ್ಡ್ ಆಗಿದೆ. ಇಂಟರ್ನೆಟ್ ಬಳಕೆದಾರರು ‘ತಾವು ಬಳಸುವ ಸಾಮಾಜಿಕ ಜಾಲತಾಣ, ಆ್ಯಪ್ಗಳಿಗೆ ಬಳಸುವ ಪಾಸ್‌ವರ್ಡ್‌ಗಳು 6.6 ಟಿಬಿ ಡೇಟಾಬೇಸ್ ಪಾಸ್‌ವರ್ಡ್‌ಗಳಾಗಿವೆ. ಇವನ್ನು ಹ್ಯಾಕರ್ಗಳು ಅತಿ ಸುಲಭವಾಗಿ ಹ್ಯಾಕ್ ಮಾಡುತ್ತಾರೆ. ಇದು ಜನರ ಸೈಬರ್ ಸುರಕ್ಷತೆಗೆ ದೊಡ್ಡ ಅಪಾಯವಾಗಿದೆ ಎಂದು ತಜ್ಞರು ಪರಿಗಣಿಸಿದ್ದಾರೆ.
ವಿಶ್ವದ ಅತ್ಯಂತ ಜನಪ್ರಿಯ ಪಾಸ್‌ವರ್ಡ್‌ಗಳಲ್ಲಿ 123456789, 12345, 000000 ಎಂಬ ಸರಳವಾದ ಅಂಕಿಗಳನ್ನೇ ಇಟ್ಟುಕೊಂಡಿದ್ದಾರೆ. ಇದು ವಿಶ್ವದಲ್ಲಿ ಶೇಕಡಾ 31 ರಷ್ಟು ಜನರು ಬಳಕೆ ಮಾಡುತ್ತಾರೆ. ಈ ವರ್ಷದ ಜಾಗತಿಕ ಪಟ್ಟಿಯಲ್ಲಿರುವ ಶೇಕಡಾ 70 ರಷ್ಟು ಪಾಸ್‌ವರ್ಡ್‌ಗಳನ್ನು ಒಂದು ಸೆಕೆಂಡ್‌ಗಿಂತ ಕಡಿಮೆ ಅವಧಿಯಲ್ಲಿ ಪತ್ತೆ ಮಾಡಬಹುದು. ಅಷ್ಟು ಸರಳವಾದ ಗುಪ್ತಸಂಖ್ಯೆಗಳನ್ನು ಬಳಕೆ ಮಾಡಲಾಗುತ್ತದೆ. ಸಾಧ್ಯವಾದಷ್ಟು ಪಾಸ್‌ಕೀಗಳನ್ನು ಭದ್ರತೆಗಾಗಿ ಕಷ್ಟಕರ ರೀತಿಯಲ್ಲಿ ಬಳಸಲು ಸಂಶೋಧಕರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ನಿಮ್ಹಾನ್ಸ್ನಲ್ಲಿ 161 ನರ್ಸಿಂಗ್ ಹುದ್ದೆಗಳ ಭರ್ತಿ; ಅರ್ಜಿ ಸಲ್ಲಿಕೆಗೆ ಇನ್ನೆರಡೇ ದಿನ ಬಾಕಿ