ಲಂಡನ್ : ಗರ್ಭಾವಸ್ಥೆಯಲ್ಲಿ ಅಥವಾ ಅದಕ್ಕೂ ಮುನ್ನ ಕೋವಿಡ್ ದೃಢಪಟ್ಟಿರುವ ತಾಯಂದಿರಿಗೆ ಜನಿಸಿರುವ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿದೆ ಎಂದು ಅಧ್ಯಯನವೊಂದು ಹೇಳಿದೆ. ಲಂಡನ್‌ನ ಕಿಂಗ್ಸ್ ಕಾಲೇಜಿನ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ವರದಿ ಬಹಿರಂಗಗೊಂಡಿದೆ.
ಸಂಶೋಧಕರ ತಂಡವು ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಕೋವಿಡ್ಗೆ ತುತ್ತಾದವರಿಗೆ ಜನಿಸಿದ 30 ಮಕ್ಕಳನ್ನು ಅಧ್ಯಯನಕ್ಕೆ ಬಳಸಿಕೊಂಡಿದೆ. ನೇಚರ್ ಇಮ್ಯುನಾಲಜಿ ಜರ್ನಲ್‌ನಲ್ಲಿ ಅಧ್ಯಯನದ ವರದಿ ಪ್ರಕಟವಾಗಿದೆ.
ಕೋವಿಡ್ ಸೋಂಕಿಗೆ ಒಳಗಾದ ತಾಯಂದಿರಿಗೆ ಜನಿಸಿದ ಮಕ್ಕಳಲ್ಲಿ ಪರಿಚಲನೆಯ ಮಧ್ಯವರ್ತಿಗಳ (Circulating Mediators) ಮಟ್ಟ ಹೆಚ್ಚಿದೆ. ಸೋಂಕಿನ ವಿರುದ್ಧ ಹೋರಾಡುವ ಜೀವಕೋಶಗಳ ಉತ್ಪತ್ತಿಯೂ ಹೆಚ್ಚಾಗಿದೆ.
ಗರ್ಭಾವಸ್ಥೆಗು ಮುನ್ನ ಕೊರೊನಾ ತಗುಲಿದ್ದ ತಾಯಂದಿರಿಗೆ ಜನಿಸಿದ ಮಕ್ಕಳಲ್ಲಿಯೂ ಪರಿಚಲನೆಯ ಮಧ್ಯವರ್ತಿಗಳ ಮಟ್ಟ ಹೆಚ್ಚಿದೆ ಎಂದು ಸಂಶೋಧಕರು ಹೇಳಿದ್ದಾರೆ. ತಾಯಿಗೆ ವೈರಾಣು ತಗುಲಿದ್ದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ನಿಷ್ಕ್ರಿಯ ಪ್ರತಿರಕ್ಷೆಯ ವರ್ಗಾವಣೆ ಎಂದು ಕರೆಯಲ್ಪಡುವ ಜರಾಯುವಿನ ಮೂಲಕ ತಾಯಂದಿರು ತಮ್ಮ ಮಗುವಿಗೆ SARS-CoV-2 ವಿರುದ್ಧ ಪ್ರತಿಕಾಯಗಳನ್ನು ರವಾನಿಸುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ವೈರಸ್, ತಾಯಿಯ ಭ್ರೂಣದ ಪ್ರತಿರಕ್ಷಣಾ ವ್ಯವಸ್ಥೆಯ ಬೆಳವಣಿಗೆ ಬದಲಿಸುವ ಸಾಮರ್ಥ್ಯವಿದೆ ಎಂದು ಅಧ್ಯಯನದ ಸಹ ಲೇಖಕ ಗಿಬ್ಬನ್ಸ್ ಹೇಳಿದ್ದಾರೆ. ಗರ್ಭಾವಸ್ಥೆಯಲ್ಲಿಯೇ ತಾಯಿಯಿಂದ ಮಗುವಿಗೆ ವೈರಸ್ ಬರುವುದು ತೀರಾ ಕಡಿಮೆ ಎಂದು ಲಂಡನ್‌ನ ಕಿಂಗ್ಸ್ ಕಾಲೇಜಿನ ಪಿಎಚ್‌ಡಿ ವಿದ್ಯಾರ್ಥಿನಿ ಸಾರಾ ಜೀ ಹೇಳಿದ್ದಾರೆ.
ತಾಯಿಗೆ ದೃಢಪಡುವ ಸೋಂಕು ಶಿಶುವಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೇಗೆ ಬದಲಾಯಿಸಬಹುದು ಮತ್ತು ಈ ಬದಲಾವಣೆಗಳು ಎಷ್ಟು ಕಾಲ ಉಳಿಯಬಹುದು ಎಂಬುದನ್ನು ಸಂಶೋಧಕರ ತಂಡ ಅಧ್ಯಯನ ಮಾಡುತ್ತಿದೆ.