ದಿನನಿತ್ಯ ಸೇವಿಸುವ ಆಹಾರ ಕ್ರಮದಲ್ಲಿ ಬದಲಾವಣೆಯಾದಾಗ ಮೊದಲು ಕಾಡುವುದೇ ಮಲಬದ್ಧತೆಯ ಸಮಸ್ಯೆ. ಕರುಳಿನ ಚಟುವಟಿಕೆ ಏರುಪೇರಾಗುವುದರಿಂದ ಮಲವಿಸರ್ಜನೆಯಲ್ಲಿ ಅನಿಯಮಿತತೆ, ಮಲ ಗಟ್ಟಿಯಾಗುವುದು ಹಾಗೂ ಮಲ ವಿಸರ್ಜನೆಗೆ ಆಯಾಸವಾಗುವುದೇ ಮಲಬದ್ಧತೆಯಾಗಿದೆ.
ಮಲಬದ್ಧತೆಯ ಕಾರಣಗಳು ಹಾಗೂ ನಿವಾರಣೋಪಾಯಗಳ ಕುರಿತು ಆಯುರ್ವೇದ ತಜ್ಞೆ ಡಾ. ಎಂ. ರಾಜ್ಯಲಕ್ಷ್ಮಿ ಅವರು ಇಲ್ಲಿ ಅನೇಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಮಲಬದ್ಧತೆಯಿಂದ ಇತರ ಸಮಸ್ಯೆಗಳ ಉದ್ಭವ
ಮಲಬದ್ಧತೆಯು ತೀರಾ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಅಲ್ಲ. ಆದರೆ ಇದರಿಂದಾಗಿ ಸಂಧಿವಾತ, ಹೈಬಿಪಿ, ಮಧುಮೇಹ, ನಿರಂತರ ತಲೆನೋವು ಇತ್ಯಾದಿ ಇತರ ಆರೋಗ್ಯ ಸಮಸ್ಯೆಗಳು ತಲೆದೋರಬಹುದು ಎನ್ನುತ್ತಾರೆ. ಇನ್ನು ಮಲಬದ್ಧತೆಯಿಂದ ಮೂಲವ್ಯಾಧಿ ಬರುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಹೊಟ್ಟೆ ಕೆಳಭಾಗ ಭಾರವಾದಂತೆನಿಸುವುದು, ಗಟ್ಟಿಯಾದ ಮಲವಿಸರ್ಜನೆ, ಮಲವಿಸರ್ಜನೆ ಪೂರ್ಣವಾಗದಿರುವುದು ಇವೆಲ್ಲ ಮಲಬದ್ಧತೆಯ ಲಕ್ಷಣಗಳಾಗಿವೆ.
ಮಲಬದ್ಧತೆಗೆ ಕಾರಣಗಳು
ಆಹಾರ ಶೈಲಿಯ ಬದಲಾವಣೆಯೊಂದರಿಂದಲೇ ಮಲಬದ್ಧತೆ ಬರುತ್ತದೆ ಎನ್ನುವಂತಿಲ್ಲ. ಈ ಕೆಳಗಿನ ಇನ್ನೂ ಹಲವಾರು ಕಾರಣಗಳಿಂದಾಗಿಯೂ ಮಲಬದ್ಧತೆ ಉಂಟಾಗಬಹುದು.
- ತೀರಾ ಆಲಸ್ಯದ ಜೀವನ ಕ್ರಮ
- ಅನಿಯಮಿತ ಊಟ ಸೇವನೆ
- ಆಹಾರದಲ್ಲಿ ನಾರಿನಂಶದ ಕೊರತೆ
- ಅತಿ ಕಡಿಮೆ ನೀರು ಕುಡಿಯುವಿಕೆ (8 ಗ್ಲಾಸ್ಗಳಿಗಿಂತ ಕಡಿಮೆ)
- ಕಾಫಿ, ಟೀ ಅತಿಯಾದ ಸೇವನೆ (ದಿನಕ್ಕೆ 4 ಕ್ಕಿಂತ ಹೆಚ್ಚು ಕಪ್)
- ಸಾರಾಯಿ ಹಾಗೂ ಧೂಮಪಾನ
- ಮಾನಸಿಕ ಒತ್ತಡ ಹಾಗೂ ಉದ್ವೇಗ
ಮಲಬದ್ಧತೆಯ ನಿವಾರಣೆಗೆ ಈ ಟಿಪ್ಸ್ ಅನುಸರಿಸಿ...
- 2 ಟೇಬಲ್ ಸ್ಪೂನ್ ಆಕಳ ತುಪ್ಪವನ್ನು 100 ಮಿಲೀ ಉಗುರು ಬೆಚ್ಚಗಿನ ಹಾಲಿಗೆ ಸೇರಿಸಿ ರಾತ್ರಿ ಮಲಗುವ ಮುನ್ನ ಸೇವಿಸಿ.
- ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 2 ಟೇಬಲ್ ಸ್ಪೂನ್ ಔಡಲ ಎಣ್ಣೆಯನ್ನು ನಿಯಮಿತವಾಗಿ ಸೇವಿಸಿ. ಮಲಬದ್ಧತೆ ಸಮಸ್ಯೆ ಕಡಿಮೆಯಾಗುವವರೆಗೂ ಇದನ್ನು ಮುಂದುವರೆಸಿ.
- ಅರ್ಧ ಟೇಬಲ್ ಸ್ಪೂನ್ ಬಡೆಸೋಪಿನ ಪುಡಿಯನ್ನು 100 ಮಿಲೀ ಉಗುರು ಬೆಚ್ಚಗಿನ ನೀರಿಗೆ ಸೇರಿಸಿ ದಿನಕ್ಕೆರಡು ಬಾರಿ ಊಟದ ಮುಂಚೆ ಸೇವಿಸಿ.
- 1 ರಿಂದ 2 ರಷ್ಟು ಟೇಬಲ್ ಸ್ಪೂನ್ ಇಸಬಗೋಲ್ ಪುಡಿಯನ್ನು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಸೇರಿಸಿ ಮಲಗುವ ಮುನ್ನ ಸೇವಿಸಿ.
- 1 ಟೇಬಲ್ ಸ್ಪೂನ್ ತ್ರಿಫಳಾ ಚೂರ್ಣವನ್ನು ಉಗುರು ಬೆಚ್ಚಗಿನ ನೀರಿಗೆ ಸೇರಿಸಿ ಮಲಗುವ ಮುನ್ನ ಸೇವಿಸಿ.
- 2 ರಿಂದ 4 ಅಂಜೂರಗಳನ್ನು ಒಂದು ಗ್ಲಾಸ್ ನೀರಲ್ಲಿ 4 ಗಂಟೆ ನೆನೆಸಿಟ್ಟು ನಂತರ ಅವನ್ನು ಸೇವಿಸಿ.
- 20 ರಷ್ಟು ಒಣದ್ರಾಕ್ಷಿಗಳನ್ನು ಸುಮಾರು 12 ಗಂಟೆಗಳ ಕಾಲ ನೀರಲ್ಲಿ ನೆನೆಸಿಟ್ಟು, ನೀರು ಸಮೇತ ದ್ರಾಕ್ಷಿ ಸೇವಿಸಿ. (ಮಧುಮೇಹಿಗಳಿಗೆ ಸೂಕ್ತವಲ್ಲ)
ಆರೋಗ್ಯಕರ ಜೀವನಶೈಲಿಯೂ ಇಂದಿನ ಅಗತ್ಯ..
- ಪ್ರತಿದಿನ ಕನಿಷ್ಠ 30 ರಿಂದ 45 ನಿಮಿಷಗಳಾದರೂ ವಾಕಿಂಗ್ ಮಾಡಿ.
- ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ 2 ಗ್ಲಾಸ್ ಉಗುರು ಬೆಚ್ಚಗಿನ ನೀರು ಸೇವಿಸಿ.
- ಕಾಲ ಕಾಲಕ್ಕೆ ಮಾರುಕಟ್ಟೆಯಲ್ಲಿ ಸಿಗುವ ನಾರಿನಂಶ ಹೆಚ್ಚಾಗಿರುವ ತಾಜಾ ತರಕಾರಿ ಹಾಗೂ ಹಸಿರು ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸಿ.
- ದಿನಕ್ಕೆ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿಯುವುದು ಅಗತ್ಯ.
- ಊಟದ ಮಧ್ಯೆ ಆದಷ್ಟೂ ನೀರು ಕುಡಿಯವುದು ಬೇಡ. ಅಗತ್ಯವಿದ್ದಲ್ಲಿ ಮಾತ್ರ ಸ್ವಲ್ಪ ನೀರು ಸೇವಿಸಿ.
- ಪ್ರತಿಬಾರಿಯೂ ಊಟದ 30 ನಿಮಿಷಗಳ ನಂತರ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಕುಡಿಯುವುದು ಒಳಿತು.
- ಊಟವಾದ ತಕ್ಷಣ 100 ಹೆಜ್ಜೆ ನಡೆದಾಡಿ.
- ಊಟದ ನಂತರ 5 ರಿಂದ 10 ನಿಮಿಷ ವಜ್ರಾಸನ ಮಾಡಿ.
- ಸಾರಾಯಿ ಹಾಗೂ ಧೂಮಪಾನಗಳಿಂದ ದೂರವಿರಲೇಬೇಕು.
- ಧ್ಯಾನ ಹಾಗೂ ಪ್ರಾಣಾಯಾಮಗಳಿಂದ ಉದ್ವೇಗ, ಖಿನ್ನತೆಗಳನ್ನು ನಿವಾರಿಸಬಹುದು.
ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ ನೀವು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಸಾಧ್ಯ. ಈ ಎಲ್ಲ ಕ್ರಮಗಳು ಅತಿ ಸರಳವಾಗಿದ್ದು, ಇವುಗಳಿಂದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ. ಬರೀ ಎಲ್ಲದಕ್ಕೂ ಮಾತ್ರೆಗಳ ಮೊರೆ ಹೋಗುವುದಕ್ಕಿಂತ ಪ್ರಕೃತಿ ಸಹಜ ವಸ್ತುಗಳಿಂದ ಆರೋಗ್ಯ ಭಾಗ್ಯ ನಮ್ಮದಾಗಿಸಿಕೊಳ್ಳುವುದು ಹಿತಕರ.