ಗಂಗಾವತಿ: ಯುವಕನೊಬ್ಬನಿಗೆ ಯಾಮಾರಿಸಿ ಉಳಿತಾಯ ಖಾತೆಯಿಂದ ಬರೋಬ್ಬರಿ 42 ಸಾವಿರ ರೂ. ಖದೀಮರು ಎಗರಿಸಿದ ಘಟನೆ ನಗರದ ಕೊಟ್ಟೂರೇಶ್ವರ ಕ್ಯಾಂಪಿನಲ್ಲಿ ನಡೆದಿದೆ.
ಕೊಟ್ಟೂರೇಶ್ವರ ಕ್ಯಾಂಪಿನ ನಿವಾಸಿ ಅಕ್ರಮ್ ಸಿರುಪುರ ಹಣ ಕಳೆದುಕೊಂಡ ವ್ಯಕ್ತಿ. ಇವರು ಗಂಗಾವತಿಯ ಎಸ್ಬಿಐ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಆದರೆ, ಯಾವುದೇ ಆನ್ಲೈನ್ ಶಾಪಿಂಗ್, ವ್ಯವಹಾರ ಮಾಡದಿದ್ದರೂ ಈ ಯುವಕನ ಖಾತೆಯಲ್ಲಿದ್ದ 42,134 ರೂ. ಹಣ ಡ್ರಾ ಮಾಡಲಾಗಿದೆ. ಒಮ್ಮೆ ಹಣ ಡ್ರಾ ಆದ ಬಳಿಕ ಸಂದೇಶ ಬಂದಿದ್ದು, ಇದರಲ್ಲಿ ಹಣ ಡ್ರಾ ಮಾಡಿರುವ ಬಗ್ಗೆ ಮಾಹಿತಿ ಇದೆ.
ಈ ಕುರಿತಂತೆ ದೂರು ನೀಡಲು ಯುವಕ ತನ್ನ ಸ್ನೇಹಿತರೊಂದಿಗೆ ನಗರ ಠಾಣೆಗೆ ಹೋದಾಗ ಅಲ್ಲಿನ ಪೊಲೀಸರು ಇದು ನಮಗೆ ಸಂಬಂಧಿಸಿಲ್ಲ. ನೀವು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಬೇಕು ಎಂದು ಹೇಳಿ ಕಳಿಸಿದ್ದಾರೆ. ಪೊಲೀಸರ ಸೂಚನೆ ಮೇರೆಗೆ ಯುವಕ ಕೊಪ್ಪಳಕ್ಕೆ ಹೋಗಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲು ಮುಂದಾದಾಗ ಅಲ್ಲಿನ ಅಧಿಕಾರಿಗಳು ನೇರವಾಗಿ ದೂರು ದಾಖಲಿಸಲು ಆಗುವುದಿಲ್ಲ. ಒಮ್ಮೆ ಬ್ಯಾಂಕಿನ ಶಾಖೆಗೆ ಹೋಗಿ ಅಲ್ಲಿ ದೂರು ನೀಡಿ ಎಂದು ಕಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಾಕಷ್ಟು ಕಟ್ಟುಪಾಡುಗಳನ್ನು ಜಾರಿಗೆ ತರುತ್ತಿವೆ. ಎಲ್ಲಾ ಅಕೌಂಟ್ಗಳಿಗೆ ಆಧಾರ್ ಲಿಂಕ್ ಕಡ್ಡಾಯ ಎಂದು ಮಾಡಿದೆ. ಇದನ್ನೇ ವರದಾನವಾಗಿ ಬಳಿಸಿಕೊಳ್ಳುತ್ತಿರುವ ಖದೀಮರು ಅಕೌಂಟ್ಗಳನ್ನು ಹ್ಯಾಕ್ ಮಾಡಿ, ಹಣ ಎಗರಿಸಲು ಸುಲಭವಾಗುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.