ಉತ್ತರ ಪ್ರದೇಶ: ಕಲ್ಲು ಮತ್ತು ಇಟ್ಟಿಗೆಯಿಂದ ಹಲ್ಲೆ ಮಾಡಿ ಆಶ್ರಮದ ಸನ್ಯಾಸಿ ಹಾಗೂ ಅವರ ಪತ್ನಿ, ಪುತ್ರನನ್ನು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಕುನ್ಹಮೌ ಗ್ರಾಮದಲ್ಲಿ ನಡೆದಿದೆ.
ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಹರ್ದೋಯಿ ಎಸ್ಪಿ ಅಮಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ಪರಿಶೀಲನೆಯಲ್ಲಿ ತೊಡಗಿದೆ. ಸನ್ಯಾಸಿ ಕುಟುಂಬ ಗ್ರಾಮದ ಹೊರಗೆ ಆಶ್ರಮವೊಂದನ್ನು ನಿರ್ಮಿಸಿದ್ದು, ಅಲ್ಲಿಯೇ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.
ಹರಿದಾಸ್ (70), ಮೀರಾ ದಾಸ್ (65) ಹಾಗೂ ನೇತ್ರಂ (45) ಕೊಲೆಯಾದ ವ್ಯಕ್ತಿಗಳಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಧಿ ವಿಜ್ಞಾನ ತಂಡದೊಂದಿಗೆ ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಕಾರಣ ಹಾಗೂ ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚುವುದಾಗಿ ಎಸ್ಪಿ ಅಮಿತ್ ಕುಮಾರ್ ತಿಳಿಸಿದ್ದಾರೆ.