ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಆರೋಪದ ಪ್ರಕರಣದಲ್ಲಿ ಭಾಗಿಯಾದ ನಟಿಯರಿಬ್ಬರ ಕಸ್ಟಡಿ ಇಂದಿಗೆ ಅಂತ್ಯವಾಗಲಿದ್ದು, ಇಬ್ಬರಿಗೆ ಜೈಲಾ ಅಥವಾ ಮತ್ತೆ ಸಿಸಿಬಿ ಕಸ್ಟಡಿಗೆ ಪಡೆಯಲಿದೆಯಾ? ಎಂಬುದು ಇಂದು ನಿರ್ಧಾರವಾಗಲಿದೆ. ಮಹಿಳಾ ಸಾಂತ್ವನ ಕೆಂದ್ರದಿಂದ ಸಿಸಿಬಿ ಪೊಲೀಸರು ಮಧ್ಯಾಹ್ನ ಎರಡು ಗಂಟೆ ಬಳಿಕ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ನ್ಯಾಯಾಲಯಕ್ಕೆ ಹಾಜರುಪಡಿಸುವುದಕ್ಕೂ ಮುನ್ನ ನಟಿಯರ ಕೊರೊನಾ ಪರೀಕ್ಷೆ, ಬಳಿಕ ಬಿಪಿ, ಶುಗರ್, ದೇಹದ ಮೇಲೆ ಗಾಯದ ಗುರುತುಗಳಿವೆಯೇ ಎಂಬುದರ ಕುರಿತು ವೈದ್ಯಕೀಯ ಪರೀಕ್ಷೆ ನಡೆಸಬೇಕಿದೆ. ಹೀಗಾಗಿ ನಟಿಯರು ಮತ್ತು ಅವರ ಆಪ್ತರನ್ನು ವೈದ್ಯಕಿಯ ಪರೀಕ್ಷೆಗೆ ಕೆ.ಸಿ. ಜನರಲ್ ಆಸ್ಪತ್ರೆಗೆ ಪೊಲೀಸರ ವಾಹನದಲ್ಲಿ ಕರೆದುಕೊಂಡು ಹೋಗಲಾಯಿತು. ಬಳಿಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.
ಒಂದು ವೇಳೆ ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ನೇರವಾಗಿ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗುತ್ತದೆ. ಆದರೆ, ಆರೋಪಿಗಳಿಗೆ ಜೈಲೂಟ ಬಹುತೇಕ ಖಚಿತ ಎನ್ನಲಾಗಿದೆ. ಇತ್ತ ಚಾಮರಾಜಪೇಟೆ ಸಿಸಿಬಿ ಪೊಲೀಸರ ವಶದಲ್ಲಿರುವ ನಟಿಯರ ಆಪ್ತರಾದ ರಾಹುಲ್, ರವಿಶಂಕರ್, ಪ್ರಶಾಂತ್, ರಾಂಖಾ, ಲೂಮ್ ಪೆಪ್ಪರ್ ಸೇರಿ ಏಳು ಆರೋಪಿಗಳ ವಿಚಾರಣೆ ಕೊನೆಯ ಹಂತಕ್ಕೆ ತಲುಪಿದೆ.
ಡ್ರಗ್ಸ್ ಮಾಫಿಯಾ ಆರೋಪ ಪ್ರಕರಣದ ನಟಿಯರ ವಿಚಾರಣೆಗೆ ಸಿಸಿಬಿ ಇನ್ಸ್ಪೆಕ್ಟರ್ ಅಂಜುಮಾಲಾ ಅವರ ನೇತೃತ್ವದಲ್ಲಿ ತಂಡ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದಿದೆ. ಡ್ರಗ್ಸ್ ಯಾವ ರೀತಿ ಸರಬರಾಜಾಗುತ್ತಿತ್ತು ಎಂಬುದು ಸೇರಿದಂತೆ ಹತ್ತು ಹಲವು ಪ್ರಶ್ನೆಗಳನ್ನು ರಾಗಿಣಿ ಮತ್ತು ಸಂಜನಾಗೆ ಕೇಳಲಿದೆ.