ಬೆಂಗಳೂರು : ಜೈಲಿನಲ್ಲಿ ಇದ್ದುಕೊಂಡೇ ಇಬ್ಬರ ಕೊಲೆಗೆ ಒಂದು ಕೋಟಿ ರೂ. ಸುಪಾರಿ ಪಡೆದಿದ್ದ ಸಂಗತಿಯನ್ನು ಪಶ್ಚಿಮವಿಭಾಗ ಮತ್ತು ಉತ್ತರ ವಿಭಾಗದ ಪೊಲೀಸರು ಬೇಧಿಸಿದ್ದಾರೆ.
ಕಾಮಾಕ್ಷಿಪಾಳ್ಯ ನಿವಾಸಿ ವರಲಕ್ಷ್ಮಿ ಎಂಬುವರ ಪತಿ ಮಾಜಿ ಕಾರ್ಪೊರೇಟರ್ ಆಗಿದ್ದರು. 2018ರಲ್ಲಿ ರಾಜಗೋಪಾಲ ನಗರದಲ್ಲಿ ಅವರ ಕೊಲೆಯಾಗಿತ್ತು. ಹೀಗಾಗಿ ಗಂಡನ ಹತ್ಯೆಯ ಪ್ರತೀಕಾರವಾಗಿ ಕೊಲೆ ಮಾಡಿದ ಆರೋಪಿಗಳ ಹತ್ಯೆಗೆ ವರಲಕ್ಷ್ಮಿ ಜೈಲಿನಲ್ಲಿದ್ದ ಆರೋಪಿಗಳಿಗೆ ಸುಪಾರಿ ನೀಡಿದ್ದರು.
ಬರೋಬ್ಬರಿ ಒಂದು ಕೋಟಿ ಕೇಳಿದ್ದ ಹಂತಕರ ಟೀಂ ಕೊನೆಗೆ ₹80 ಲಕ್ಷಕ್ಕೆ ವ್ಯವಹಾರ ಕುದುರಿಸಿ ಡೀಲ್ ಪಡೆದಿದ್ದರು. ಸುಪಾರಿ ಪಡೆದು ಹೊಂಚು ಹಾಕ್ತಿದ್ದ ಮಾಹಿತಿ ಪಡೆದ ಪೊಲೀಸರು 9 ಹಂತಕರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ತನಿಖೆ ವೇಳೆ ರಾಜಗೋಪಾಲನಗರದಲ್ಲಿ ರಾಜಕೀಯ ಪ್ರಭಾವ ಹೊಂದಿದ್ದ ಗೋವಿಂದೇಗೌಡಗೆ ಇದೇ ಏರಿಯಾದ ಚಿಕ್ಕತಿಮ್ಮೇಗೌಡ ಅಡ್ಡ ಬಂದಿರುವ ಕಾರಣ ವರಲಕ್ಷ್ಮಿ ಹಾಗೂ ಗಂಡ ಗೋವಿಂದೇಗೌಡ ಸೇರಿ 2016ರಲ್ಲಿ ಕೊಲೆ ಮಾಡಿದ್ದರು. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನ ಪೊಲೀಸರು ಬಂಧಿಸಿದಾಗ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ರು.
ಕೊಲೆಯಾಗಿದ್ದ ಚಿಕ್ಕತಿಮ್ಮೇಗೌಡರ ಸಹೋದರರಾದ ಹೇಮಂತ್ ಕುಮಾರ್ ಮತ್ತು ನಟರಾಜ್ ಅವರು ಅಣ್ಣ ಕೊಲೆಯಾದ ಎರಡು ವರ್ಷಕ್ಕೆ ಸರಿಯಾಗಿ ಗೋವಿಂದೇಗೌಡನನ್ನ 2018 ರಲ್ಲಿ ಅಟ್ಟಾಡಿಸಿ ಕಲ್ಯಾಣ ಮಂದಿರವೊಂದರ ಆವರಣದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಎಸ್ಕೇಪ್ ಆಗಿದ್ರು. ಇದೇ ಕೊಲೆಗೆ ಪ್ರತೀಕಾರ ಪಡೆಯುವುದಾಗಿ ಹೇಳಿದ್ದ ವರಲಕ್ಷ್ಮಿ ಅವತ್ತೆ ಶಪಥ ಮಾಡಿದ್ದಳಂತೆ.
ರಾಜಗೋಪಾಲ ನಗರದ ರೌಡಿಶೀಟರ್ ರಾಜ್ ಅಲಿಯಾಸ್ ಕ್ಯಾಟ್ ರಾಜ ಕುಖ್ಯಾತ ರೌಡಿ ಲಕ್ಷ್ಮಣನ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿದ್ದ ಇದೇ ಸಂದರ್ಭ ಬಳಸಿ ವರಲಕ್ಷ್ಮಿ, ಕ್ಯಾಟ್ ರಾಜನನ್ನ ಸಂಪರ್ಕಿಸಿ ಜೈಲ್‌ನಲ್ಲಿದ್ದೇ 1 ಕೋಟಿ ರೂ. ಸುಪಾರಿಯನ್ನ ₹80 ಲಕ್ಷಕ್ಕೆ ಡೀಲ್ ಕುದುರಿಸಿದ್ದರು. ನಂತ್ರ ಕ್ಯಾಟ್ ಹೊರಗಡೆ ಇದ್ದ ತಮ್ಮ ಸಹಚರರಿಗೆ ಡೀಲ್ ನೀಡಿದ್ದರು. ಈ ವಿಚಾರ ತಿಳಿದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ನಟರಾಜ್ ದೂರು ದಾಖಲಿಸಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸ್ರು ಕ್ಯಾಟ್ ರಾಜನ ಒಂಭತ್ತು ಜನ ಸಹಚರರನ್ನ ಬಂಧಿಸಿದ್ದಾರೆ. ಜೊತೆಗೆ ಬಾಡಿ ವಾರಂಟ್ ಮೂಲಕ ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ಕ್ಯಾಟ್ ರಾಜ ಮತ್ತು ಬಳ್ಳಾರಿ ಜೈಲಿನಲ್ಲಿರುವ ಹೇಮಂತ್ನನ್ನ ತಮ್ಮ ವಶಕ್ಕೆ ಪಡೆಯಲಿದ್ದಾರೆ.
ಸದ್ಯ ಕಾಮಾಕ್ಷಿಪಾಳ್ಯ ಹಾಗೂ ರಾಜಗೋಪಾಲನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ತನಿಖೆ ಮುಂದುವರೆದಿದೆ. ಹಾಗೆ ಸುಪಾರಿ ಹತ್ಯೆ ಪ್ರಕರಣದ ಕಿಂಗ್ ಪಿನ್ ವರಲಕ್ಷಿ ಅಲಿಯಾಸ್ ಖಾರದ ಪುಡಿ ವರಲಕ್ಷ್ಮಿ ಬಂಧನ ಭೀತಿಯಲ್ಲಿ ಎಸ್ಕೇಪ್ ಆಗಿದ್ದು, ಪೊಲೀಸರು ವರಲಕ್ಷ್ಮಿ ಪತ್ತೆಗೆ ಶೋಧ ಮುಂದುವರಿಸಿದ್ದಾರೆ.