ಅನೇಕಲ್: ಚೀಟಿ ವ್ಯವಹಾರದಲ್ಲಿ 100 ಕ್ಕೂ ಹೆಚ್ಚು ಜನರಿಗೆ 8 ಕೋಟಿ ರೂ. ಹಣ ಪಂಗನಾಮ ಹಾಕಿ ಪರಾರಿಯಾಗಿದ್ದ ಮಹಿಳೆಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಬಸವನಪುರ ಗ್ರಾಮದ ಮಂಜುಳಾ ಎಂಬುವವರ ಬಳಿ ಲಕ್ಷಾಂತರ ರೂ. ಮೌಲ್ಯದ ಚೀಟಿಗಳನ್ನು ಜನ ಹಾಕಿಕೊಂಡಿದ್ದರು. ಮೊದಲು ಜನರ ಬಳಿ ವಿಶ್ವಾಸದಿಂದ ನಡೆದುಕೊಂಡ ಮಂಜುಳಾ, ಚೀಟಿ ಹಣವನ್ನ ಕಾಲಕಾಲಕ್ಕೆ ನೀಡುತ್ತಾ ಬಂದಿದ್ದಳು. ಬಳಿಕ ಕೋಟಿ ಕೋಟಿ ರೂ. ಮೌಲ್ಯದ ಚೀಟಿಗಳನ್ನು ನಡೆಸಲು ಶುರು ಮಾಡಿದ ಮಂಜುಳಾ, ತಿಂಗಳಿಗೆ ಲಕ್ಷಾಂತರ ಹಣವನ್ನ ಜನರಿಂದ ವಸೂಲಿ ಮಾಡುತ್ತಿದ್ದಳು. ಕಳೆದ ಒಂದು ವಾರದಿಂದ ಮನೆ ಖಾಲಿ ಮಾಡಿರುವ ಮಂಜುಳಾ ಸುಮಾರು 8 ಕೋಟಿ ಮೌಲ್ಯದ ಚೀಟಿ ಹಣವನ್ನು ಕಟ್ಟಿಸಿಕೊಂಡು ಚೀಟಿದಾರರಿಗೆ ಹಣ ನೀಡದೇ ಊರು ಖಾಲಿ ಮಾಡಿದ್ದಳು. ನಂತರ ಹುಳಿಮಾವು ಪೊಲೀಸರು ಎಚ್ಚೆತ್ತುಕೊಂಡು, ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಮೊದಲು ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಮಂಜುಳಾ, ಬಳಿಕ ಚೀಟಿ ವ್ಯವಹಾರ ಆರಂಭಿಸಿದ್ದಳು. ಗಾರ್ಮೆಂಟ್ಸ್ ನಲ್ಲಿ ಪರಿಚಯವಿದ್ದ ಮಹಿಳೆಯರನ್ನೇ ಮೊದಲು ಟಾರ್ಗೆಟ್ ಮಾಡಿಕೊಂಡಿದ್ದ ಈಕೆ, ಅವರ ಬಳಿ ಚೀಟಿ ಹಾಕಿಸಿಕೊಂಡಿದ್ದಳು. ಇದೇ ಚೀಟಿ ವ್ಯವಹಾರದ ಮೂಲಕವೇ ಒಂದು ಸ್ವಂತ ಮನೆ ಸಹ ಖರೀದಿ ಮಾಡಿದ್ದಳು. ಬಣ್ಣದ ಮಾತಿನಿಂದ ಜನರಿಗೆ ಮಂಕು ಬೂದಿ ಎರಚಿದ್ದ ಮಂಜುಳಾ, ತನ್ನ ಸ್ವಂತ ಮನೆಯನ್ನು ಸಹ ಮಾರಿ ಪರಾರಿಯಾಗಿದ್ದಳು.