ಸೋನಿಪತ್: ದೆಹಲಿ-ಹರಿಯಾಣ ಗಡಿ ಭಾಗವಾದ ಸಿಂಘು ಗಡಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧದ ಧರಣಿಯಲ್ಲಿ ಪಾಲ್ಗೊಂಡಿದ್ದ ರೈತ ಹೃದಯಾಘಾತದಿಂದ ಅಸುನೀಗಿದ್ದಾರೆ.
ಮೃತ ರೈತನನ್ನು ಪಂಜಾಬ್‌ನ ಸಂಗ್ರೂರ್ ನಿವಾಸಿ ಶಂಶರ್ ಸಿಂಗ್ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರತಿಭಟನೆ ವೇಳೆ ಈವರೆಗೂ 20ಕ್ಕೂ ಹೆಚ್ಚು ರೈತರು ಸಾವನ್ನಪ್ಪಿದ್ದು, ಸಿಂಘು ಗಡಿಯಲ್ಲಿ ಮೃತಪಟ್ಟ ರೈತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಗಾಜಿಯಾಬಾದ್ನಲ್ಲಿ ಪ್ರತಿಭಟನಾನಿರತ ರೈತ ಆತ್ಮಹತ್ಯೆ
ನಿನ್ನೆಯಷ್ಟೇ ದೆಹಲಿ - ಉತ್ತರ ಪ್ರದೇಶ ಗಡಿ ಭಾಗವಾದ ಗಾಜಿಯಾಬಾದ್ನಲ್ಲಿ ಪ್ರತಿಭಟಿಸುತ್ತಿದ್ದ ರೈತ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರೈತರು ಗಡಿಭಾಗಗಳಲ್ಲಿ ಕಳೆದ 38 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಮುಖಂಡರೊಂದಿಗೆ ಸರ್ಕಾರ ನಡೆಸಿರುವ ಮಾತುಕತೆಗಳು ವಿಫಲವಾಗಿದ್ದು, ಚಳಿ, ಗಾಳಿ, ಬಿಸಿಲು ಎನ್ನದೇ ರೈತರು ಪಟ್ಟುಬಿದ್ದು ತಮ್ಮ ಹೋರಾಟ ಮುಂದುವರೆಸಿದ್ದಾರೆ.