ಬಿಕಾನೆರ್(ರಾಜಸ್ಥಾನ): ವಾಹನ ತಪಾಸಣೆಗೆಂದು ಕಾರನ್ನು ತಡೆದ ಹೋಂ ಗಾರ್ಡ್ಗೆ ಕಾರಿನಿಂದ ಗುದ್ದಿ, ಕೆಲ ದೂರದವರೆಗೆ ಆತನನ್ನು ವಾಹನದ ಬಾನೆಟ್ ಮೇಲೆ ಹೊತ್ತೊಯ್ದ ಘಟನೆ ಇಲ್ಲಿನ ಉರ್ಮುಲ್ ಸರ್ಕಲ್‌ನಲ್ಲಿ ಶನಿವಾರ ನಡೆದಿದ್ದು, ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ನಲ್ ಪೊಲೀಸ್ ಠಾಣಾ ಪೊಲೀಸರು ಆರೋಪಿ ಕಾರು ಚಾಲಕ ಅಭಿಷೇಕ್ನನ್ನು ಬಂಧಿಸಿದ್ದಾರೆ. ಹೋಮ್ ಗಾರ್ಡ್ ಕೊಲೆಗೆ ಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ನಗರದ ಉರ್ಮುಲ್ ಸರ್ಕಲ್‌ನಲ್ಲಿ ಈ ಘಟನೆ ನಡೆದಿದ್ದು, ಶನಿವಾರ ಸಂಜೆ ವಾಹನ ತಪಾಸಣೆ ವೇಳೆ ಹೋಮ್ ಗಾರ್ಡ್ ಜವಾನ್ ಕಾರಿನ ದಾಖಲೆ ಪತ್ರಗಳನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಖದೀಮನನ್ನು ತಡೆಯಲು ಮುಂದಾದಾಗ ಪೊಲೀಸ್ನನ್ನು ಕಾರಿನ ಬಾನೆಟ್ ಮೇಲೆ ಹೊತ್ತೊಯ್ದಿದ್ದಾನೆ.
ನಂತರ ಅಲ್ಲಿದ್ದ ಗೃಹರಕ್ಷಕ ಮುಖೇಶ್ ಕುಮಾರ್, ಕಾರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಚಾಲಕ ಸ್ವಲ್ಪ ದೂರ ಕ್ರಮಿಸಿ ದೀನ್ ದಯಾಳ್ ಸರ್ಕಲ್ ಬಳಿ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಹೋಮ್ ಗಾರ್ಡ್ ಗಾಯಗೊಂಡಿದ್ದು, ಅವರನ್ನು ಪಿಬಿಎಂ ಟ್ರಾಮಾ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ.