ಹಥ್ರಾಸ್ (ಉತ್ತರಪ್ರದೇಶ): ರಾಷ್ಟ್ರದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿರುವ 19 ವರ್ಷದ ಹಥ್ರಾಸ್ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕಣ್ಮುಂದಿರುವಾಗಲೇ ಇದೀಗ ಇಂತಹದ್ದೇ ಮತ್ತೊಂದು ಘಟನೆ ಜರುಗಿದೆ.
15 ದಿನಗಳ ಹಿಂದೆ ಉತ್ತರಪ್ರದೇಶದ ಅಲಿಗರ್ನಲ್ಲಿ ಅತ್ಯಾಚಾರ ಹಾಗೂ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಹಥ್ರಾಸ್ ಮೂಲದ ಆರು ವರ್ಷದ ಬಾಲಕಿ ಇಂದು ಕೊನೆಯುಸಿರೆಳೆದಿದ್ದಾಳೆ. ಅಲಿಗರ್ ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿರುವ ಕುಟುಂಬಸ್ಥರು ಹಾಗೂ ಸ್ಥಳೀಯರು ಅಪ್ರಾಪ್ತೆಯ ಮೃತದೇಹವನ್ನಿಟ್ಟುಕೊಂಡು ಹಥ್ರಾಸ್ನ ಗ್ರಾಮದ ಹೊರಗೆ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ನ್ಯಾಯ ಸಿಗುವವರೆಗೂ ಅಂತ್ಯ ಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ದೌಡಾಯಿಸಿದರೂ ಪೊಲೀಸರು ಅಂತ್ಯ ಸಂಸ್ಕಾರ ಮಾಡುವಂತೆ ಮನವಿ ಮಾಡಿದ್ದಾರೆ.
ಸೆಪ್ಟೆಂಬರ್ 14ರಂದು ಉತ್ತರಪ್ರದೇಶದ ಹಥ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು, ಬರ್ಬರವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.