ಪಂಜಾಬ್: ದೆಹಲಿ - ಪಂಜಾಬ್ ಗಡಿ ಭಾಗವಾದ ಟಿಕ್ರಿ ಗಡಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ಮತ್ತಿಬ್ಬರು ರೈತರು ಮೃತಪಟ್ಟಿದ್ದಾರೆ.
ಮೃತ ರೈತರನ್ನು ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಲುಂಡೇವಾಲಾ ಗ್ರಾಮದ ಜಗದೀಶ್ ಸಿಂಗ್ (61) ಹಾಗೂ ನಿರ್ಮಲ್ ಸಿಂಗ್ ಎಂದು ಗುರುತಿಸಲಾಗಿದೆ. ಜಗದೀಶ್ ಸಿಂಗ್ ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದರೆ, ನಿರ್ಮಲ್ ಸಿಂಗ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ದೆಹಲಿ ಗಡಿಯಿಂದ ಮನೆಗೆ ಮರಳಿದ್ದ ನಿರ್ಮಲ್ ಸಿಂಗ್ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರು ಐದು ಲಕ್ಷ ರೂ. ಸಾಲವನ್ನು ಸಹ ಮಾಡಿದ್ದರು ಎಂದು ಹೇಳಲಾಗಿದೆ. ಮೃತ ರೈತನ ಸಾಲ ಮನ್ನಾ ಮಾಡಿ ಕುಟುಂಕ್ಕೆ ಪರಿಹಾರ ನೀಡಬೇಕು ಎಂದು ರೈತರ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ.
ಇದನ್ನೂ ಓದಿ: ಗಾಂಧಿ ಹಂತಕ 'ಗೋಡ್ಸೆ' ಹೆಸರಲ್ಲಿ ಗ್ರಂಥಾಲಯ ತೆರೆದ ಹಿಂದೂ ಮಹಾಸಭಾ
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ರೈತರು ಗಡಿಭಾಗಗಳಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 8 ಬಾರಿ ರೈತ ಮುಖಂಡರೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದ್ದರೂ ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ಸಿಕ್ಕಿಲ್ಲ. ಹೀಗಾಗಿ ಪಟ್ಟುಬಿಡದೇ ಅನ್ನದಾತರು ತಮ್ಮ ಧರಣಿ ಮುಂದುವರಿಸಿದ್ದಾರೆ.
ಆದರೆ ಈವರೆಗೆ ಕೆಲ ರೈತರು ಆತ್ಮಹತ್ಯೆ ಮಾಡಿಕೊಂಡರೆ, ಇನ್ನು ಕೆಲವರು ಹೃದಯಾಘಾತದಿಂದಾಗಿ, ಚಳಿ ತಡೆಯಲಾರದೇ ಹಾಗೂ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಹೀಗೆ ಪ್ರತಿಭಟನೆ ವೇಳೆ ಸುಮಾರು 20ಕ್ಕೂ ಹೆಚ್ಚು ರೈತರು ಕೊನೆಯುಸಿರೆಳೆದಿದ್ದಾರೆ.