ತೆಲಂಗಾಣ: ಇಲ್ಲಿನ ಮೇದಕ್ ಜಿಲ್ಲೆಯ ಪಾಪಣ್ಣಪೇಟೆ ಮಂಡಲದ ಪೊಡಚನಪಲ್ಲಿ ಗ್ರಾಮದಲ್ಲಿ ನಿನ್ನೆ ಸಂಜೆ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಮಗು ಇಂದು ಮುಂಜಾನೆ ಮೃತಪಟ್ಟಿದೆ.
ಬುಧವಾರ ಸಂಜೆ ಕೃಷಿ ಚಟುವಟಿಕೆಗೆಂದು ಕೊಳವೆ ಬಾವಿ ಕೊರೆದ ಅರ್ಧ ಗಂಟೆಯಲ್ಲೇ ಸಂಜಯ್ ಸಾಯಿವರ್ಧನ್ ಎಂಬ ಬಾಲಕ ಬೋರ್ವೆಲ್ ಒಳಗೆ ಬಿದ್ದಿದ್ದನು. ಪೋಷಕರು ಬೇರೆ ಕೆಲಸಲ್ಲಿ ತೊಡಗಿಕೊಂಡಿದ್ದಾಗ, ಘಟನೆ ನಡೆದಿತ್ತು.
ಸತತ 11 ಗಂಟೆಗಳ ಕಾಲ ಪೊಲೀಸರು, NDRF ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರಾದರೂ ಆಕ್ಸಿಜನ್ ಕೊರತೆಯಿಂದ ಬಾಲಕ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಹೊರತೆಗಯಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೇದಕ್ ಜಿಲ್ಲಾಧಿಕಾರಿ ಧರ್ಮ ರೆಡ್ಡಿ, ಬೋರ್ವೆಲ್ ಕೊರೆಸಿ ಅದನ್ನು ಮುಚ್ಚಿರಲಿಲ್ಲ. ಕೊಳವೆ ಬಾವಿ ಮಾಲೀಕನಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದ್ದಾರೆ.