ಕಲಬುರಗಿ: ಬೈಕ್ ಮತ್ತು ಬುಲೆರೋ ಪಿಕಪ್ ಮಧ್ಯೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ನಗರದ ಹೊರವಲಯದ ಭೋಸಗಾ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಆಳಂದ ತಾಲೂಕಿನ ಕುಡಕಿ ಗ್ರಾಮದ ಶರಣು (28) ಮತ್ತು ಮಾಳಪ್ಪ (30) ಮೃತ ಬೈಕ್ ಸವಾರರು ಎಂದು ಗುರುತಿಸಲಾಗಿದೆ.
ಬೈಕ್ ಮೇಲೆ ಮೂವರು ಕುಳಿತು ಕುಡಕಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಎದುರಿಗೆ ಬಂದ ಬುಲೆರೋ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಓರ್ವನಿಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತದ ನಂತರ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.