ಮೈಸೂರು: ಸ್ನಾನದ ಕೋಣೆಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಸುಣ್ಣದಕೇರಿಯಲ್ಲಿ ನಡೆದಿದೆ.
ದರ್ಶನ್ (17) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ತನ್ನ ಬೈಕ್ಗೆ ನಂಬರ್ ಪ್ಲೇಟ್ ಹಾಕಿಸಿರಲಿಲ್ಲ. ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅದನ್ನು ಪ್ರಶ್ನಿಸಿ ಈತನಿಂದ ಬೈಕ್ ಅನ್ನು ವಶಕ್ಕೆ ಪಡೆದಿದ್ದರು. ಅದನ್ನು ಹಿಂಪಡೆಯಲು ಠಾಣೆಗೆ ಹೋಗಿದ್ದಾಗ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿ ನಂತರ ಬೈಕ್ ಮರಳಿಸಿದ್ದಾರೆ ಎನ್ನಲಾಗಿದೆ.
ನನ್ನ ಮಗನ ಆತ್ಮಹತ್ಯೆಗೆ ಕೆ.ಆರ್.ಠಾಣೆ ಪೊಲೀಸರೇ ಕಾರಣ. ಪೊಲೀಸರು ಕಿರುಕುಳ ನೀಡಿದ್ದರಿಂದ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದ ಈತನ ಪೋಷಕರು, ತನಿಖೆ ಮಾಡಬೇಕೆಂದು ಆಗ್ರಹಿಸಿದರು. ಈ ಸಂಬಂಧ ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.