ಇಸ್ಲಾಮಾಬಾದ್, ಪಾಕಿಸ್ತಾನ: ಪಾಕಿಸ್ತಾನದ ಪೇಶಾವರದ ಮಸೀದಿಯೊಂದರಲ್ಲಿ ಸೋಮವಾರ ನಡೆದ ಆತ್ಮಾಹುತಿ ದಾಳಿಯಲ್ಲಿ ಸತ್ತವರ ಸಂಖ್ಯೆ 100ಕ್ಕೆ ತಲುಪಿದೆ. ಮಂಗಳವಾರ ಅಧಿಕಾರಿಗಳು ಶಂಕಿತ ಆತ್ಮಾಹುತಿ ಬಾಂಬರ್‌ನನ್ನು ಪತ್ತೆ ಮಾಡಿದ್ದಾರೆ. ಹೀಗಿರುವಾಗ ತಮ್ಮ ದೇಶದ ಪರಿಸ್ಥಿತಿಯನ್ನು ಭಾರತಕ್ಕೆ ಹೊಲಿಕೆ ಮಾಡಿ ಹೇಳಿಕೆಗಳನ್ನು ನೀಡಿದ್ದಾರೆ ಪಾಕ್ ರಕ್ಷಣಾ ಸಚಿವ. ಎಲ್ಲ ಕಡೆಯಿಂದ ಕಷ್ಟಗಳಿಂದ ಸುತ್ತುವರೆದಿರುವ ದೇಶವು ತನ್ನ ಪರಿಸ್ಥಿತಿಯನ್ನು ಭಾರತದೊಂದಿಗೆ ಹೋಲಿಸುತ್ತಿದೆ. ಭಾರತ ಅಥವಾ ಇಸ್ರೇಲ್‌ನಲ್ಲಿಯೂ ಸಹ ನಮಾಜ್ ಸಮಯದಲ್ಲಿ ಆರಾಧಕರು ಹುತಾತ್ಮರಾಗಿರಲಿಲ್ಲ. ಆದರೆ, ಇದು ಪಾಕಿಸ್ತಾನದಲ್ಲಿ ಸಂಭವಿಸಿದೆ. ಪೇಶಾವರದಲ್ಲಿ ನಡೆದ ರಕ್ತಪಾತಕ್ಕೆ ಯಾರು ಹೊಣೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಪ್ರಶ್ನಿಸಿದ್ದಾರೆ.
ಇದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕ್ಷಣ. ನಾವು ಎಲ್ಲಿ ನಿಂತಿದ್ದೇವೆ ಎಂಬುದನ್ನು ನೋಡಬೇಕಿದೆ. ಭಯೋತ್ಪಾದನೆಯ ವಿರುದ್ಧ ಇಡೀ ದೇಶ ಒಂದಾಗಬೇಕು. ಆಗ ಮಾತ್ರ ಅದರ ವಿರುದ್ಧ ಹೋರಾಡಲು ಸಾಧ್ಯ. ಇದು ಯಾವುದೇ ನಿರ್ದಿಷ್ಟ ಪಂಗಡದ ಯುದ್ಧವಲ್ಲ, ಇದು ಪಾಕಿಸ್ತಾನಿ ರಾಷ್ಟ್ರದ ಯುದ್ಧ ಎಂದರು. ಭಯೋತ್ಪಾದನೆಯ ವಿರುದ್ಧದ ಯುದ್ಧವು 2010-2017 ರವರೆಗೆ ಹೋರಾಡಲಾಗಿದೆ. ಈ ಯುದ್ಧವು ಪಿಪಿಪಿ ಅಧಿಕಾರಾವಧಿಯಲ್ಲಿ ಸ್ವಾತ್‌ನಿಂದ ಪ್ರಾರಂಭವಾಯಿತು ಮತ್ತು ಪಿಎಂಎಲ್-ಎನ್‌ನ ಹಿಂದಿನ ಅಧಿಕಾರಾವಧಿಯಲ್ಲಿ ಕೊನೆಗೊಂಡಿತು ಮತ್ತು ಕರಾಚಿಯಿಂದ ಸ್ವಾತ್‌ವರೆಗೆ ದೇಶದಲ್ಲಿ ಶಾಂತಿ ಸ್ಥಾಪಿಸಲಾಯಿತು ಎಂದು ಪಾಕ್ ರಕ್ಷಣಾ ಸಚಿವ ಹೇಳಿದ್ದಾರೆ
ಇನ್ನು ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಆತ್ಮಾಹುತಿ ದಾಳಿಯ ಹೊಣೆ ಹೊತ್ತುಕೊಂಡಿದೆ. ಇದು ಕಳೆದ ವರ್ಷ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿ ಅವರ ಸೇಡಿನ ದಾಳಿಯ ಭಾಗವಾಗಿದೆ ಎಂದು ಹೇಳಲಾಗುತ್ತಿದೆ. ಸ್ಫೋಟದ ಸ್ಥಳದಿಂದ ಶಂಕಿತ ಆತ್ಮಾಹುತಿ ಬಾಂಬರ್‌ನ ತಲೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಂಕಿತ ದಾಳಿಕೋರನನ್ನು ಮೊಹಮದ್ ಏಜೆನ್ಸಿಯ ಸಲೀಂ ಖಾನ್ ಅವರ ಪುತ್ರ ಮೊಹಮ್ಮದ್ ಅಯಾಜ್ (37) ಎಂದು ಗುರುತಿಸಲಾಗಿದೆ.
ದಾಳಿಕೋರನು ನಾಲ್ಕು ಹಂತದ ಭದ್ರತೆಯನ್ನು ಭೇದಿಸಿ ಮಸೀದಿಯನ್ನು ಪ್ರವೇಶಿಸಿದ್ದ. ಸ್ಫೋಟದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ದಾಳಿಕೋರರು ಪೊಲೀಸ್ ಲೈನ್ ಪ್ರದೇಶದಲ್ಲಿ ಭಾರಿ ಭದ್ರತೆಯಿರುವ ಮಸೀದಿಯನ್ನು ಹೇಗೆ ಪ್ರವೇಶಿಸಿದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಸ್ಫೋಟಕ್ಕೆ 10-12 ಕೆಜಿ ಸ್ಫೋಟಕಗಳನ್ನು ಬಳಸಲಾಗಿದೆ ಎಂದು ಪ್ರಾಂತೀಯ ಪೊಲೀಸ್ ಮುಖ್ಯಸ್ಥ ಮೊಝಾಮ್ ಜಾಹ್ ಅನ್ಸಾರಿ ಹೇಳಿದ್ದಾರೆ.
ಜನವರಿ 30 ರಂದು ಪಾಕಿಸ್ತಾನದ ಪೇಶಾವರದ ಮಸೀದಿಯಲ್ಲಿ ನಡೆದ ಸ್ಫೋಟದಲ್ಲಿ 100 ಜನರು ಸಾವನ್ನಪ್ಪಿದ್ದರು. ಈ ಸ್ಫೋಟದಲ್ಲಿ ಅನೇಕ ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನೇಕ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ. ಪೊಲೀಸರನ್ನು ಗುರಿಯಾಗಿಸಿಕೊಂಡು ಈ ಆತ್ಮಾಹುತಿ ದಾಳಿ ನಡೆಸಿರುವುದು ಗಮನಾರ್ಹ. ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಂಡಾಗ 300 ರಿಂದ 400 ಪೊಲೀಸರು ಮಧ್ಯಾಹ್ನದ ಪ್ರಾರ್ಥನೆಗಾಗಿ ಅಲ್ಲಿ ಜಮಾಯಿಸಿದ್ದರು.
ಸತ್ತವರಲ್ಲಿ 97 ಪೊಲೀಸ್ ಅಧಿಕಾರಿಗಳು ಮತ್ತು ಮೂವರು ನಾಗರಿಕರು ಸೇರಿದ್ದಾರೆ. 27 ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಂತರಿಕ ಸಚಿವ ರಾಣಾ ಸನಾವುಲ್ಲಾ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ತಿಳಿಸಿದ್ದಾರೆ.
ಓದಿ: 4 ಸ್ತರದ ಭದ್ರತೆ ಭೇದಿಸಿ ಮಸೀದಿ ಪ್ರವೇಶಿಸಿದ್ದ ತಾಲಿಬಾನ್ ಆತ್ಮಹತ್ಯಾ ಬಾಂಬರ್! ಸಾವಿನ ಸಂಖ್ಯೆ 72 ಕ್ಕೇರಿಕೆ