ಅಯೋವಾ, ಅಮೆರಿಕ: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜೆಯ ಬಳಿಕ ಅಮೆರಿಕದಲ್ಲಿ ಶಾಲೆಗಳು ಮತ್ತೆ ಆರಂಭವಾಗಿವೆ. ಆದ್ರೆ ಮೊದಲ ದಿನವೇ ಇಲ್ಲಿನ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಅಮೆರಿಕದ ಅಯೋವಾ ರಾಜ್ಯದಲ್ಲಿ ನಡೆದ ಈ ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. 17 ವರ್ಷದ ಶಂಕಿತ ಶೂಟರ್ ಗುಂಡಿನ ದಾಳಿ ನಡೆಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಬೆಳ್ಳಂಬೆಳಗ್ಗೆ ಶೂಟೌಟ್: ಅಯೋವಾದ ಪೆರ್ರಿ ಪ್ರೌಢಶಾಲೆಯಲ್ಲಿ ಗುರುವಾರ ಬೆಳಗ್ಗೆ 7:30ರ ಸುಮಾರಿಗೆ (ಸ್ಥಳೀಯ ಕಾಲಮಾನ) ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ ಒಟ್ಟು 1785 ವಿದ್ಯಾರ್ಥಿಗಳಿದ್ದಾರೆ. ಪೆರ್ರಿ ಒಂದು ಸಣ್ಣ ಪಟ್ಟಣವಾಗಿದ್ದು, ಡೆಸ್ ಮೊಯಿನ್ಸ್ ನಗರದಿಂದ 65 ಕಿಲೋಮೀಟರ್ ದೂರದಲ್ಲಿದೆ. ದಾಳಿ ಬಳಿಕ ಶಂಕಿತ ಶೂಟರ್ ಕೂಡ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಸಾರ್ವಜನಿಕ ಸುರಕ್ಷತಾ ವಿಭಾಗದ ಅಧಿಕಾರಿ ಮಿಚ್ ಮೊರ್ಟ್‌ವೈಟ್ ತಿಳಿಸಿದ್ದಾರೆ.
ಆರನೇ ತರಗತಿ ವಿದ್ಯಾರ್ಥಿ ಸಾವು: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಅಧಿಕಾರಿ, ಗುಂಡಿನ ದಾಳಿಯಲ್ಲಿ 5 ಮಂದಿ ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ಇತರ ನಾಲ್ವರ ಸ್ಥಿತಿ ಸ್ಥಿರವಾಗಿದೆ. ಘಟನೆಯಲ್ಲಿ ಆರನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಪೆರ್ರಿ ಶಾಲೆಯ ಪ್ರಾಂಶುಪಾಲರ ಮೇಲೂ ಗುಂಡು ಹಾರಿಸಲಾಗಿದೆ ಎಂದು ಮಿಚ್ ಮೊರ್ಟ್‌ವೈಟ್ ಹೇಳಿದರು.
17 ವರ್ಷದ ಬಾಲಕನಿಂದ ಕೃತ್ಯ: ಮಾಧ್ಯಮಗಳ ಪ್ರಕಾರ, ಮಹಿಳೆಯೊಬ್ಬರು ಪೆರ್ರಿ ಸಿಟಿ ಪೊಲೀಸರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಗುಂಡಿನ ದಾಳಿ ಬಗ್ಗೆ ಮಾಹಿತಿ ಪಡೆದ ಕೆಲ ನಿಮಿಷಗಳಲ್ಲೇ ಪೊಲೀಸರು ಘಟನಾ ಸ್ಥಳವನ್ನು ತಲುಪಿದ್ದರು. ಆಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಯಭೀತರಾಗಿ ಓಡಿಹೋಗುವುದನ್ನು ಅಧಿಕಾರಿಗಳು ಗಮನಿಸಿದರು. ಈ ವೇಳೆ ಕೆಲವರು ಗಾಯಗೊಂಡು ನರಳುತ್ತಿರುವುದನ್ನು ಕಂಡ ಪೊಲೀಸರು ರಕ್ಷಣೆಗೆ ಮುಂದಾಗಿದ್ದಾರೆ. ಶೂಟರ್ ಅನ್ನು 17 ವರ್ಷದ ಡೈಲನ್ ಬಟ್ಲರ್ ಎಂದು ಗುರುತಿಸಲಾಗಿದೆ. ಆತ ಶಾಟ್ ಗನ್ ಮತ್ತು ಮಾರಕಾಸ್ತ್ರಗಳ ಜೊತೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮೊರ್ಟ್‌ವೈಟ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆರೋಪಿ: "ಶೂಟರ್‌ನ ಹಿನ್ನೆಲೆಯನ್ನು ನಾವು ತನಿಖೆ ಮಾಡುತ್ತಿದ್ದೇವೆ. ಶಂಕಿತ ಬಾಲಕ ಗುಂಡಿನ ದಾಳಿಯ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಸ್ಟ್‌ಗಳನ್ನು ಸಹ ಮಾಡಿದ್ದ'' ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.