ವಿಶ್ವಸಂಸ್ಥೆ: ಗಾಜಾದಲ್ಲಿ ಯುದ್ಧ ಇನ್ನೊಂದು ತಿಂಗಳು ಮುಂದುವರಿದರೆ, ಪ್ಯಾಲೆಸ್ಟೈನ್‌ನಲ್ಲಿ ಬಡತನದ ಪ್ರಮಾಣವು ಈಗಿರುವುದಕ್ಕಿಂತ ಶೇ 34ರಷ್ಟು ಏರಿಕೆಯಾಗಲಿದ್ದು, ಹೆಚ್ಚುವರಿಯಾಗಿ ಸುಮಾರು ಅರ್ಧ ದಶಲಕ್ಷ ಜನ ಬಡತನಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ. ಅಂತಹ ಸನ್ನಿವೇಶದಲ್ಲಿ, ಪ್ಯಾಲೆಸ್ಟೈನ್‌ನ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 8.4 ರಷ್ಟು ಕುಸಿಯಲಿದ್ದು, 1.7 ಬಿಲಿಯನ್ ಡಾಲರ್ ನಷ್ಟವಾಗಲಿದೆ ಎಂದು ಯುಎನ್ ಅಭಿವೃದ್ಧಿ ಕಾರ್ಯಕ್ರಮ (ಯುಎನ್ ಡಿಪಿ) ಮತ್ತು ಪಶ್ಚಿಮ ಏಷ್ಯಾದ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ಇಎಸ್ ಸಿಡಬ್ಲ್ಯೂಎ) ಆರಂಭಿಕ ಅಂದಾಜುಗಳು ತಿಳಿಸಿವೆ.
ಯುದ್ಧ ಆರಂಭವಾಗಿ ಒಂದು ತಿಂಗಳಾಗುತ್ತಿರುವ ಮಧ್ಯೆ ಬಡತನ ಶೇಕಡಾ 20 ರಷ್ಟು ಹೆಚ್ಚಾಗಿದೆ ಮತ್ತು ಆರ್ಥಿಕ ಬೆಳವಣಿಗೆ ಶೇಕಡಾ 4.2 ರಷ್ಟು ಕುಸಿದಿದೆ ಎಂದು ಅಂದಾಜಿಸಲಾಗಿದೆ ಎಂದು ಪ್ಯಾಲೆಸ್ಟೈನ್ ಮೇಲೆ ಗಾಜಾ ಯುದ್ಧದ ಸಾಮಾಜಿಕ-ಆರ್ಥಿಕ ಪರಿಣಾಮಗಳ ಬಗ್ಗೆ ಗುರುವಾರ ಬಿಡುಗಡೆಯಾದ ವರದಿಯಲ್ಲಿ ಎರಡೂ ಏಜೆನ್ಸಿಗಳು ತಿಳಿಸಿವೆ.
ಯುದ್ಧದ ಮೊದಲ ತಿಂಗಳಲ್ಲಿ ಈಗಾಗಲೇ 3,90,000 ಉದ್ಯೋಗಗಳು ಕಳೆದುಹೋಗಿವೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಅಂದಾಜಿಸಿದೆ ಎಂದು ಅಂಕಿ ಅಂಶಗಳು ತಿಳಿಸಿವೆ. ಅಂದಾಜಿನ ಪ್ರಕಾರ, ಯುದ್ಧ ಮೂರನೇ ತಿಂಗಳಿಗೆ ಪ್ರವೇಶಿಸಿದರೆ ಸುಮಾರು 45 ಪ್ರತಿಶತದಷ್ಟು ಬಡತನ ಹೆಚ್ಚಾಗಲಿದೆ. ಅಂದರೆ ಮತ್ತೆ 6,60,000 ಕ್ಕಿಂತ ಹೆಚ್ಚು ಜನ ಬಡವರಾಗಲಿದ್ದಾರೆ. ಹಾಗೆಯೇ ಜಿಡಿಪಿ ಒಟ್ಟು 2.5 ಬಿಲಿಯನ್ ಡಾಲರ್ ನಷ್ಟದೊಂದಿಗೆ ಶೇಕಡಾ 12.2 ರಷ್ಟು ಕುಸಿಯುತ್ತದೆ.
ಪ್ರಸ್ತುತ, 1.8 ಮಿಲಿಯನ್ ಪ್ಯಾಲೆಸ್ಟೈನಿಯರು ಬಡತನದಲ್ಲಿ ಬದುಕುತ್ತಿದ್ದಾರೆ ಎಂದು ಇಎಸ್ಸಿಡಬ್ಲ್ಯೂಎ ಕಾರ್ಯನಿರ್ವಾಹಕ ಕಾರ್ಯದರ್ಶಿ ರೋಲಾ ದಸ್ತಿ ಹೇಳಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್-ಇಸ್ರೇಲ್ ಯುದ್ಧ ಭುಗಿಲೇಳುವ ಮೊದಲು ಗಾಜಾದಲ್ಲಿ ಬಡತನದ ಪ್ರಮಾಣ ಶೇಕಡಾ 61 ರಷ್ಟಿತ್ತು.
ವೆಸ್ಟ್ ಬ್ಯಾಂಕ್ನಲ್ಲಿ ಬಡತನದ ಪ್ರಮಾಣ ಶೇಕಡಾ 30 ರಷ್ಟಿದೆ ಎಂದು ಯುಎನ್ ಸಹಾಯಕ ಪ್ರಧಾನ ಕಾರ್ಯದರ್ಶಿ ಮತ್ತು ಯುಎನ್ಡಿಪಿಯ ಅರಬ್ ರಾಷ್ಟ್ರಗಳ ಪ್ರಾದೇಶಿಕ ಬ್ಯೂರೋದ ನಿರ್ದೇಶಕ ಅಬ್ದಲ್ಲಾ ಅಲ್ ದರ್ದಾರಿ ಹೇಳಿದ್ದಾರೆ. ಸಂಘರ್ಷದ ತೀವ್ರತೆಯನ್ನು ಅವಲಂಬಿಸಿ ಪ್ಯಾಲೆಸ್ಟೈನ್‌ನಲ್ಲಿ ಅಭಿವೃದ್ಧಿಯು 11 ರಿಂದ 16 ವರ್ಷಗಳವರೆಗೆ ಮತ್ತು ಗಾಜಾದಲ್ಲಿ 16 ರಿಂದ 19 ವರ್ಷಗಳವರೆಗೆ ಹಿಂದಕ್ಕೆ ತಳ್ಳಲ್ಪಡುತ್ತದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಭಾರತೀಯ ಅಕ್ರಮ ವಲಸಿಗರಿಗೆ ಇನ್ನು ಆಶ್ರಯ ನೀಡಲ್ಲ ಯುಕೆ; ಭಾರತ, ಜಾರ್ಜಿಯಾ ಸೇಫ್ ಕಂಟ್ರಿ ಲಿಸ್ಟ್ಗೆ ಸೇರ್ಪಡೆ