ಲಾಹೋರ್ (ಪಾಕಿಸ್ತಾನ್) : ಈ ವರ್ಷದ ಬಜೆಟ್ ನಂತರ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪದ ಹಿಂದೆ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ಮೆಂಟ್ (ಪಿಡಿಎಂ) ನೇತೃತ್ವದ ಸರ್ಕಾರದ ದುರುದ್ದೇಶವಿದೆ ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಆರೋಪಿಸಿದ್ದಾರೆ. ಬಜೆಟ್ ಅನ್ನು ಸಾಂಪ್ರದಾಯಿಕವಾಗಿ ಜೂನ್ನ ಮೊದಲ ಎರಡು ವಾರಗಳೊಳಗೆ ಪ್ರಸ್ತುತಪಡಿಸಲಾಗುತ್ತದೆ ಮತ್ತು ಮುಂದಿನ ತಿಂಗಳು ಸಾರ್ವತ್ರಿಕ ಚುನಾವಣೆ ನಡೆಸುವುದು ತುಂಬಾ ಅವಧಿಪೂರ್ವವಾಗುತ್ತದೆ ಎಂದು ಫೆಡರಲ್ ಸರ್ಕಾರವು ಸಮರ್ಥಿಸಿಕೊಂಡಿದೆ. ಹೀಗಾಗಿ ಈ ವರ್ಷ ಕಳೆದ ನಂತರ ಚುನಾವಣೆಗಳನ್ನು ನಡೆಸಲು ಪ್ರಸ್ತುತ ಸರ್ಕಾರ ಒತ್ತು ನೀಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದೇಶಾದ್ಯಂತ ಚುನಾವಣೆ ನಡೆಸುವ ದಿನಾಂಕದ ಕುರಿತು ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಫೆಡರಲ್ ಸರ್ಕಾರ ಮತ್ತು ವಿರೋಧ ಪಕ್ಷ ಪಿಟಿಐ ಮಾತುಕತೆ ನಡೆಸುತ್ತಿವೆ ಮತ್ತು ಮುಂದಿನ ವಾರ ಅಂತಿಮ ಸಭೆ ನಡೆಯುವ ನಿರೀಕ್ಷೆಯಿದೆ. ಮೇ 14 ರ ಮೊದಲು ಸರ್ಕಾರವು ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳನ್ನು ವಿಸರ್ಜಿಸಿದರೆ ಮಾತುಕತೆ ಮುಂದುವರಿಸಲು ತಮ್ಮ ಪಕ್ಷ ಸಿದ್ಧವಾಗಿದೆ ಎಂದು ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಹೇಳಿದರು.
ಸಿಂಧ್ ಮತ್ತು ಬಲೂಚಿಸ್ತಾನ್ ಅಸೆಂಬ್ಲಿಗಳು ಮತ್ತು ರಾಷ್ಟ್ರೀಯ ಅಸೆಂಬ್ಲಿಯನ್ನು ಇನ್ನೂ ವಿಸರ್ಜಿಸಲಾಗಿಲ್ಲ, ಆದರೆ ಪಂಜಾಬ್ ಮತ್ತು ಖೈಬರ್ ಪಖ್ತುನಖ್ವಾ ಅಸೆಂಬ್ಲಿಗಳನ್ನು ಖಾನ್ ಅವರ ನಿರ್ದೇಶನದ ಮೇರೆಗೆ ಜನವರಿಯಲ್ಲಿ ವಿಸರ್ಜನೆ ಮಾಡಲಾಗಿದೆ. ಪಾಕಿಸ್ತಾನದ ಆರ್ಥಿಕತೆಗೆ ತೀವ್ರ ಪೆಟ್ಟು ನೀಡಿರುವ ನಿರಂತರ ರಾಜಕೀಯ ಬಿಕ್ಕಟ್ಟನ್ನು ಕೊನೆಗಾಣಿಸಲು ಮತ್ತು ಚುನಾವಣೆಗಾಗಿ ಒಮ್ಮತಕ್ಕೆ ಬರುವಂತೆ ನಾಗರಿಕ ಸಮಾಜ ಸಂಘಟನೆಗಳು ಒತ್ತಾಯಿಸಿವೆ. ಬಜೆಟ್ ನಂತರ ಚುನಾವಣೆ ನಡೆಸುವುದಕ್ಕೆ ತಮ್ಮ ಒಪ್ಪಿಗೆ ಇಲ್ಲ ಎಂದಿರುವ ಇಮ್ರಾನ್ ಖಾನ್, ದೇಶದಲ್ಲಿ ಕೂಡಲೇ ಚುನಾವಣೆಗಳನ್ನು ನಡೆಸುವಂತೆ ಒತ್ತಾಯಿಸಿದ್ದಾರೆ. ಚುನಾವಣೆಗಳು ನಡೆಯುವ ಭರವಸೆ ಕಮರಿಹೋದಲ್ಲಿ ಪಾಕಿಸ್ತಾನವು ಶ್ರೀಲಂಕಾ ರೀತಿಯಲ್ಲಿ ಭಯಾನಕ ಬಿಕ್ಕಟ್ಟಿಗೆ ಗುರಿಯಾಗಬಹುದು ಎಂದು ಇಮ್ರಾನ್ ಖಾನ್ ಎಚ್ಚರಿಕೆ ನೀಡಿದ್ದಾರೆ.
ನೋಟು ಅಮಾನ್ಯೀಕರಣ ಮಾಡುವಂತೆ ಸಲಹೆ: ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಪಾಕಿಸ್ತಾನವು ತನ್ನ 5,000 ರೂಪಾಯಿ ನೋಟು ರದ್ದುಗೊಳಿಸಬೇಕು ಎಂದು ಪಾಕಿಸ್ತಾನದ ಅರ್ಥಶಾಸ್ತ್ರಜ್ಞರೊಬ್ಬರು ಸಲಹೆ ನೀಡಿದ್ದಾರೆ. ಭಾರತದಲ್ಲಿ ನೋಟು ಅಮಾನ್ಯೀಕರಣವು ಅತ್ಯಂತ ಉತ್ತಮವಾಗಿ ಕೆಲಸ ಮಾಡಿದೆ ಮತ್ತು ಆ ಕ್ರಮದ ನಂತರ ಅದರ ತೆರಿಗೆ ಸಂಗ್ರಹಗಳು ಹೆಚ್ಚಾಗಿವೆ ಎಂದು ಅವರು ಭಾರತದ ಉದಾಹರಣೆಯನ್ನು ಉಲ್ಲೇಖಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಪಾಡ್‌ಕ್ಯಾಸ್ಟ್‌ನಲ್ಲಿ, ಪಾಕಿಸ್ತಾನದ ಆರ್ಥಿಕತೆಯಲ್ಲಿ 8 ಶತಕೋಟಿ ಟ್ರಿಲಿಯನ್ ರೂಪಾಯಿ ನಗದು ಹರಿದಾಡುತ್ತಿದೆ ಎಂದು ಅಮ್ಮರ್ ಖಾನ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಎಲ್ಲವೂ ನಗದು ರೂಪದಲ್ಲಿ ನಡೆಯುತ್ತಿದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ತನ್ನ ವಾಹನಕ್ಕೆ ಪೆಟ್ರೋಲ್ ಖರೀದಿಸಿದರೆ, ಅವನು ಡಾಲರ್‌ನಲ್ಲಿ ಆಮದು ಮಾಡಿಕೊಳ್ಳುವ ಪೆಟ್ರೋಲ್ ಅನ್ನು ರೂಪಾಯಿ ನೀಡಿ ಖರೀದಿಸುತ್ತಾನೆ. ಇದರೊಂದಿಗೆ, ಅವರು ಯಾವುದೇ ತೆರಿಗೆಯನ್ನು ಪಾವತಿಸದೆ ಅನೌಪಚಾರಿಕ ಆರ್ಥಿಕತೆಯಿಂದ ನಗದು ಪಾವತಿಸುವ ಮೂಲಕ ಔಪಚಾರಿಕ ಆರ್ಥಿಕತೆಯನ್ನು ಉತ್ತೇಜಿಸುತ್ತಿದ್ದಾರೆ. ಸಮಸ್ಯೆ ಇರುವುದು ಇಲ್ಲಿಯೇ ಎಂದು ಅರ್ಥಶಾಸ್ತ್ರಜ್ಞ ಅಮ್ಮರ್ ಖಾನ್ ಹೇಳಿದ್ದಾರೆ.
ಇದನ್ನೂ ಓದಿ : ಸುಡಾನ್ ಸಂಘರ್ಷದಲ್ಲಿ ಮೃತರ ಸಂಖ್ಯೆ 528ಕ್ಕೇರಿಕೆ: 4500 ಜನರಿಗೆ ಗಾಯ