ಸಿಯೋಲ್, ದಕ್ಷಿಣ ಕೋರಿಯಾ: ದಕ್ಷಿಣ ಕೊರಿಯಾದ ಸಿಯೊಂಗ್ನಾಮ್ ನಗರದಲ್ಲಿ ವ್ಯಕ್ತಿಯೊಬ್ಬ ಪಾದಚಾರಿ ಮಾರ್ಗಕ್ಕೆ ನುಗ್ಗಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದು, ವಾಹನದಿಂದ ಇಳಿದು ದಾರಿಹೋಕರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಈ ಘಟನೆಯಲ್ಲಿ 14 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶಂಕಿತ ವ್ಯಕ್ತಿ ಕಪ್ಪು ಸೂಟ್ ಮತ್ತು ಕನ್ನಡಕ ಧರಿಸಿ ಮಚ್ಚು ಝಳಪಿಸುತ್ತಿದ್ದರು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
14 ಮಂದಿಗೆ ಗಾಯ: ಅಧಿಕಾರಿಗಳ ಪ್ರಕಾರ, ಕನಿಷ್ಠ ಒಂಬತ್ತು ಜನರು ಇರಿತಕ್ಕೊಳಗಾಗಿದ್ದಾರೆ. ಅವರಲ್ಲಿ ಎಂಟು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು ಇತರ ಐವರು ವಾಹನ ಡಿಕ್ಕಿಯಲ್ಲಿ ಗಾಯಗೊಂಡಿದ್ದಾರೆ, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಸಿಕ್ಕಿರುವ ಮಾಹಿತಿ ಪ್ರಕಾರ: ಸಿಯೊಂಗ್ನಮ್ ನಗರದಲ್ಲಿ ಸರಿ ಸುಮಾರು ಸಂಜೆ 6 ಕ್ಕೆ ಶಂಕಿತ ವ್ಯಕ್ತಿ ಕಪ್ಪು ಸೂಟ್ ಮತ್ತು ಕನ್ನಡಕ ಧರಿಸಿ ಮೊದಲು ಪಾದಚಾರಿ ಮಾರ್ಗದಲ್ಲಿ ಕಾರು ನುಗ್ಗಿಸಿದ್ದಾನೆ. ಆ ವೇಳೆ, ಐವರು ಗಾಯಗೊಂಡಿದ್ದರು. ಬಳಿಕ ಕಾರಿನಿಂದ ಇಳಿದು ಸುಮಾರು 9 ಜನರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಐದು ನಿಮಿಷಗಳ ನಂತರ ಪೊಲೀಸರು 20 ಶಂಕಿತರನ್ನು ಬಂಧಿಸಿದ್ದಾರೆ.
ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಗಸ್ತು ಹೆಚ್ಚು: ದಕ್ಷಿಣ ಕೊರಿಯಾದ ಪೊಲೀಸ್ ಮುಖ್ಯಸ್ಥರು ಅಪಘಾತವನ್ನು "ಭಯೋತ್ಪಾದನೆಯ ಕೃತ್ಯ" ಎಂದು ಕರೆದಿದ್ದಾರೆ. ಜನನಿಬಿಡ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಲಾಗುವುದು ಮತ್ತು ಭದ್ರತಾ ಕ್ಯಾಮೆರಾಗಳ ಮೂಲಕ ಕಣ್ಗಾವಲು ಬಲಪಡಿಸಲಾಗುವುದು ಎಂದು ಹೇಳಿದರು.
ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?: ಶಂಕಿತ ವ್ಯಕ್ತಿ ಕಪ್ಪು ಸೂಟ್ ಮತ್ತು ಕನ್ನಡಕ ಧರಿಸಿ ಮಚ್ಚನ್ನು ಝಳಪಿಸುತ್ತಿದ್ದರು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಕು ಸುಮಾರು 50 ರಿಂದ 60 ಸೆಂ.ಮೀ ಉದ್ದ ಇತ್ತು ಎನ್ನಲಾಗಿದೆ.
ಆರೋಪಿ ಬಂಧನ: ದಕ್ಷಿಣ ಜಿಯೊಂಗ್ಗಿ ಪ್ರಾಂತೀಯ ಪೊಲೀಸ್ ಅಧಿಕಾರಿ ಯೂನ್ ಸುಂಗ್-ಹ್ಯುನ್ ಪ್ರಕಾರ, ಸಿಯೊಂಗ್ನಾಮ್ ನಗರದ ಸುರಂಗಮಾರ್ಗ ನಿಲ್ದಾಣದ ಬಳಿ ಕಿಕ್ಕಿರಿದ ಜನರ ಓಡಾಟ ಇರುತ್ತದೆ. ಸಂಭವಿಸಿದ ದಾಳಿಯಲ್ಲಿ ಕನಿಷ್ಠ ಐದು ಜನರು ಗಾಯಗೊಂಡಿದ್ದಾರೆ ಮತ್ತು ಒಂಬತ್ತು ಮಂದಿಗೆ ಇರಿದಿದ್ದಾರೆ. ಘಟನಾ ಸ್ಥಳದಲ್ಲಿ ಅಧಿಕಾರಿಗಳು 22 ವರ್ಷದ ಶಂಕಿತ ಯುವಕನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮಚ್ಚು ಖರೀದಿಸಿದ್ದ ಆರೋಪಿ: ಜಿಯೊಂಗ್ಗಿಯ ಬುಂಡಾಂಗ್ ಜಿಲ್ಲಾ ಪೊಲೀಸ್ ಠಾಣೆಯ ಅಧಿಕಾರಿ ಪಾರ್ಕ್ ಜಿಯೊಂಗ್-ವೊನ್ ಪ್ರಕಾರ, ಪೊಲೀಸ್ ವಿಚಾರಣೆ ವೇಳೆ ಶಂಕಿತನು ಅಸಮಂಜಸವಾಗಿ ಮಾತನಾಡಿದ್ದಾನೆ. ಶಂಕಿತನ ಕುಟುಂಬದವರು ಪೊಲೀಸರಿಗೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದನು ಎಂದು ಹೇಳಿದ್ದಾರೆ. ಶಂಕಿತ ವ್ಯಕ್ತಿ ಬುಧವಾರ ಬೇರೆ ಶಾಪಿಂಗ್ ಮಾಲ್ನಿಂದ ಇರಿತಕ್ಕೆ ಬಳಸಿದ ಎರಡು ಮಚ್ಚುಗಳನ್ನು ಖರೀದಿಸಿದ್ದಾನೆ ಎಂದು ಪಾರ್ಕ್ ಹೇಳಿದರು.
ಓದಿ: ಕೇದಾರನಾಥ್ನಲ್ಲಿ ವರುಣನ ಆರ್ಭಟ.. ಎರಡು ಅಂಗಡಿ ನೆಲಸಮ, 13ಕ್ಕೂ ಹೆಚ್ಚು ಜನ ನಾಪತ್ತೆ