ಸಿಂಗಾಪುರ: ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಸಿಂಗಾಪುರವು ಭಾರತದಿಂದ 180 ಕಿರಿಯ ವೈದ್ಯರನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ. ಸರ್ಕಾರದ ಈ ಕ್ರಮವನ್ನು ದೇಶದೊಳಗಡೆ ಅನೇಕರು ಪ್ರಶ್ನಿಸುತ್ತಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. 2022 ರಿಂದ 2024 ರವರೆಗೆ ಭಾರತದಿಂದ ವಾರ್ಷಿಕ 60 ವೈದ್ಯಕೀಯ ಅಧಿಕಾರಿಗಳನ್ನು ನೇಮಕ ಮಾಡಲು ಕರೆಯಲಾಗಿರುವ ಟೆಂಡರ್ ಅಕ್ಟೋಬರ್ 10 ರಂದು ಮುಕ್ತಾಯಗೊಳ್ಳಲಿದೆ. ಈ ಯೋಜನೆಯನ್ನು 2025 ರವರೆಗೆ ವಿಸ್ತರಿಸುವ ಸಾಧ್ಯತೆಯಿದೆ.
ಸಿಂಗಾಪುರವು ಸ್ಥಳೀಯವಾಗಿ ಭಾರಿ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಮತ್ತು ದೇಶದ ಆರೋಗ್ಯ ಸಾಮರ್ಥ್ಯದ ಅಗತ್ಯಗಳನ್ನು ಪೂರೈಸಲು ವಿದೇಶದಿಂದ ವೈದ್ಯರನ್ನು ನೇಮಿಸಿಕೊಳ್ಳುತ್ತಿದೆ ಎಂದು ಸಿಂಗಾಪುರದ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಕಂಪನಿಯಾದ MOH ಹೋಲ್ಡಿಂಗ್ಸ್ (MOHH) ಹೇಳಿದೆ. ಟೆಂಡರ್ ಕರೆಯಲಾಗಿರುವುದನ್ನು ಖಾತ್ರಿಪಡಿಸಿದ ಸಂಸ್ಥೆಯು ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ ಮತ್ತು ಬ್ರಿಟನ್‌ನಿಂದಲೂ ವೈದ್ಯರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದೆ.
ವೈದ್ಯಕೀಯ ನೋಂದಣಿ ಕಾಯ್ದೆಯಲ್ಲಿ ಪಟ್ಟಿ ಮಾಡಲಾದ ವೈದ್ಯಕೀಯ ಕಾಲೇಜುಗಳಿಂದ ಪದವಿ ಪಡೆದ ಅಭ್ಯರ್ಥಿಗಳನ್ನು ಹುಡುಕುತ್ತಿರುವುದಾಗಿ ಕಂಪನಿ ಹೇಳಿದೆ. ಹೀಗೆ ನೇಮಕ ಮಾಡಿಕೊಳ್ಳಲಾಗುವ ವೈದ್ಯರಿಗೆ ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಕ್ಲಿನಿಕಲ್ ಅಭ್ಯಾಸಕ್ಕಾಗಿ ಷರತ್ತುಬದ್ಧ ನೋಂದಣಿಯನ್ನು ಮಾತ್ರ ನೀಡಲಾಗುವುದು. ಸಿಂಗಾಪುರ್ ವೈದ್ಯಕೀಯ ಮಂಡಳಿಯಿಂದ ಗುರುತಿಸಲ್ಪಟ್ಟ ವೈದ್ಯಕೀಯ ಕಾಲೇಜುಗಳಿಂದ ಪದವಿ ಪಡೆದ ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಕಂಪನಿ ಹೇಳಿದೆ.
ಭಾರತದಿಂದ ವೈದ್ಯರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ವಿರೋಧ ವ್ಯಕ್ತವಾಗುತ್ತಿದೆ. ಭಾರತೀಯ ವೈದ್ಯರನ್ನು ಆಮದು ಮಾಡಿಕೊಳ್ಳುವ ಕ್ರಮವನ್ನು ಪ್ರಶ್ನಿಸಲಾಗುತ್ತಿದೆ. ಅಲ್ಲದೆ ನಕಲಿ ಪ್ರಮಾಣಪತ್ರ ಪಡೆದು ವೈದ್ಯರಾಗುವವರ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಸಿಂಗಾಪುರದೊಳಗಿರುವ ಮೆಡಿಕಲ್ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯನ್ನು ಏಕೆ ಹೆಚ್ಚಿಸಲಾಗುತ್ತಿಲ್ಲ ಎಂಬ ಪ್ರಶ್ನೆಗಳೂ ಉದ್ಭವಿಸಿವೆ.
MOHH ವತಿಯಿಂದ ಪ್ರತಿ ವರ್ಷ ಸುಮಾರು 700 ಕಿರಿಯ ವೈದ್ಯರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು MOHH ಹೇಳಿದೆ. ಅವರಲ್ಲಿ ಶೇ 90ರಷ್ಟು ವೈದ್ಯರು ಸಿಂಗಪುರ ನಿವಾಸಿಗಳು. ಇವರು ಸಿಂಗಾಪುರದ ವೈದ್ಯಕೀಯ ಶಾಲೆಗಳಲ್ಲಿ ತರಬೇತಿ ಪಡೆದಿದ್ದಾರೆ ಅಥವಾ ಮಾನ್ಯತೆ ಪಡೆದ ಸಾಗರೋತ್ತರ ವೈದ್ಯಕೀಯ ಶಾಲೆಗಳಿಂದ ಪದವಿ ಪಡೆದು ಸಿಂಗಾಪುರಕ್ಕೆ ಹಿಂದಿರುಗಿದ್ದಾರೆ. 2012 ರಿಂದ 2019ರ ಮಧ್ಯೆ ದೇಶದ ವೈದ್ಯಕೀಯ ಕಾಲೇಜುಗಳಲ್ಲಿನ ಒಟ್ಟಾರೆ ಪ್ರವೇಶಾತಿಯನ್ನು ಶೇ 45ಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಸಿಂಗಾಪುರ್ ಮೂಲದ ನೌಕೆ ಕಂಪನಿ ವಿರುದ್ಧದ ಪ್ರಕರಣ ರದ್ದು ಮಾಡಲು ಹೈಕೋರ್ಟ್ ನಿರಾಕರಣೆ