ಟೊಪ್ಪೆನಿಶ್ (ವಾಷಿಂಗ್ಟನ್): ಅಮೆರಿಕದ ವಾಷಿಂಗ್ಟನ್ ರಾಜ್ಯದಲ್ಲಿ ಗುರುವಾರ 19 ವರ್ಷದ ವ್ಯಕ್ತಿಯೊಬ್ಬ ನಾಲ್ವರಿಗೆ ಗುಂಡು ಹಾರಿಸಿ, ಮೂವರನ್ನು ಕೊಂದು ಹಾಕಿದ್ದಾನೆ. ಮೂವರನ್ನು ಶೂಟ್ ಮಾಡಿದ ಬಳಿಕ ತನಗೆ ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ವಾಷಿಂಗ್ಟನ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಟೊಪ್ಪೆನಿಶ್‌ನ ಮನೆಯೊಂದರಲ್ಲಿ ಮುಂಜಾನೆ 5 ಗಂಟೆಗೆ ವ್ಯಕ್ತಿಯೊನ್ನ 13 ವರ್ಷದ ಬಾಲಕ, 18 ವರ್ಷದ ಯುವತಿ ಮತ್ತು 21 ವರ್ಷದ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಟೊಪ್ಪೆನಿಶ್ ಪೊಲೀಸ್ ಮುಖ್ಯಸ್ಥ ಜಾನ್ ಕ್ಲಾರಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. 21 ವರ್ಷದ ಯುವಕನ ಮೇಲೆ ಗುಂಡು ಹಾರಿಸಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಗುಂಡಿನ ದಾಳಿ ನಡೆಸಿ ಮೂವರನ್ನು ಕೊಂದು, ಒಬ್ಬನನ್ನು ಗಾಯಗೊಳಿಸಿದ 19 ವರ್ಷದ ಹಂತಕ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಟೊಪ್ಪೆನಿಶ್ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈತ ಯಾಕೆ ದಾಳಿ ಮಾಡಿದ, ಈ ಹಿಂದೆ ಇವರ ಮೇಲೆ ದ್ವೇಷ ಇತ್ತಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ದುರಂತದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಇಲಾಖೆ ಸನ್ನದ್ಧವಾಗಿದೆ. ಪ್ರಾದೇಶಿಕ ಕಾನೂನು ಜಾರಿ ಪಾಲುದಾರರ ಸಹಯೋಗದೊಂದಿಗೆ ಕೂಲಂಕಷ ತನಿಖೆ ನಡೆಸಲಾಗುವುದು ಎಂದು ಕ್ಲಾರಿ ಇದೆ ವೇಳೆ ಸ್ಪಷ್ಟನೆ ಕೂಡಾ ನೀಡಿದ್ದಾರೆ. ಟೊಪ್ಪೆನಿಶ್ ಪಟ್ಟಣ ಸುಮಾರು 8,600 ಜನರ ಜನಸಂಖ್ಯೆಯನ್ನು ಹೊಂದಿದೆ. ಇದು ಯಕಾಮಾ ಭಾರತೀಯ ಮೀಸಲು ನಗರವಾಗಿದೆ ಎಂಬುದು ವಿಶೇಷ.
ಅಮೆರಿಕದಲ್ಲಿ ಇಂತಹ ಘಟನೆಗಳು ವರದಿಯಾಗುತ್ತಲೆ ಇರುತ್ತವೆ. ಶಾಲಾ ಮಕ್ಕಳ ಕೈ ಯಲ್ಲಿ ಗನ್ ಕೊಡುವ ಬಗ್ಗೆ ಅಥವಾ ಬಳಕೆ ಮಾಡುತ್ತಿರುವ ಬಗ್ಗೆ ಅಮೆರಿಕ ಅಧ್ಯಕ್ಷರು ಸಹ ಕಳವಳ ವ್ಯಕ್ತಪಡಿಸಿದ್ದುಂಟು. ಈ ಬಗ್ಗೆ ಕ್ರಮಕ್ಕೆ ಸೂಚನೆ ನೀಡಲಾಗಿದ್ದರು. ಇಂತಹ ಪ್ರಕರಣಗಳು ಅಮೆರಿಕದಲ್ಲಿ ಮರುಕಳಿಸುತ್ತಲೇ ಇವೆ.
ಕಳೆದ ಸೆಪ್ಟೆಂಬರ್‌ನಲ್ಲಿ, ವಿದ್ಯಾರ್ಥಿಯಾಗಿದ್ದ ಅಪ್ರಾಪ್ತ ವಯಸ್ಕನೊಬ್ಬ ಲೂಸಿಯಾನಾದಲ್ಲಿ ಶಾಲಾ ಆವರಣದಲ್ಲಿ ಗುಂಡು ಹಾರಿಸಿದ್ದ, ಇದರಿಂದಾಗಿ ಒಬ್ಬ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿದ್ದ. ಈ ಘಟನೆಯಲ್ಲಿ ಇಬ್ಬರಿಗೆ ಗಾಯಗಳಾಗಿದ್ದವು. ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ಜೈಲಿಗೆ ಅಟ್ಟಿದ್ದರು.
ಇದನ್ನು ಓದಿ: ಹಮಾಸ್ ಒತ್ತೆಯಲ್ಲಿದ್ದವರ ಪೈಕಿ 203 ಕುಟುಂಬ ಗುರುತಿಸಿದ ಇಸ್ರೇಲ್; ಇಬ್ಬರು ಬಂಧಿತ ಇಸ್ರೇಲಿಗರ ಶವ ಪತ್ತೆ