ಕೀವ್(ಉಕ್ರೇನ್): ರಷ್ಯಾವು ಮರಿಯುಪೋಲ್ನ ದಾಳಿಯಲ್ಲಿ ಮೃತರಾದ 210 ಸೈನಿಕರ ದೇಹವನ್ನು ಉಕ್ರೇನ್ಗೆ ಕಳುಹಿಸಿದೆ ಎಂದು ಉಕ್ರೇನ್‌ನ ಮಿಲಿಟರಿ ಗುಪ್ತಚರ ಸಂಸ್ಥೆ ಹೇಳಿದೆ. ಅವುಗಳಲ್ಲಿ ಅಜೋವ್‌ಸ್ಟಲ್ ಉಕ್ಕಿನ ಸ್ಥಾವರದ ಮೇಲೆ ರಷ್ಯಾ ದಾಳಿ ಮಾಡಿದಾಗ ಮೃತಪಟ್ಟ ಸೈನಿಕರ ದೇಹ ಎಂದು ಸಂಸ್ಥೆ ಹೇಳಿದೆ.
ಸ್ಥಾವರದ ಅವಶೇಷಗಳಲ್ಲಿ ಇನ್ನೂ ಎಷ್ಟು ಮೃತ ದೇಹಗಳಿವೆ ಎಂಬುದರ ಬಗ್ಗೆ ಉಕ್ರೇನ್‌ನ ಮಿಲಿಟರಿ ಗುಪ್ತಚರ ಸಂಸ್ಥೆ ಮಂಗಳವಾರ ಸ್ಪಷ್ಟಪಡಿಸಿಲ್ಲ. ನಾಶವಾದ ಬಂದರು ನಗರವನ್ನು ರಷ್ಯಾ ಈಗ ನಿಯಂತ್ರಿಸುತ್ತಿದೆ.
ಕಳೆದ ವಾರದಿಂದ ಮೃತ ದೇಹಗಳನ್ನು ಹಿಂತಿರುಗಿಸುವ ಪ್ರಕ್ರಿಯೆ ಆರಂಭವಾಯಿತು. ಉಕ್ರೇನ್ ಮತ್ತು ರಷ್ಯಾ ಶನಿವಾರದಂದು 320 ಶವಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಎರಡು ರಾಷ್ಟ್ರಗಳು 160 ದೇಹಗಳನ್ನು ಮರಳಿ ಪಡೆದಿವೆ.
ಉಕ್ರೇನಿಯನ್ ಹೋರಾಟಗಾರರು ಸುಮಾರು ಮೂರು ತಿಂಗಳ ಕಾಲ ಉಕ್ಕಿನ ಸ್ಥಾವರದಿಂದ ಹೋರಾಟ ನಡೆಸಿದ್ದರು. ಆದರೆ, ಮೇ ತಿಂಗಳಲ್ಲಿ ರಷ್ಯಾವು ಭೂ, ಸಮುದ್ರ ಮತ್ತು ವಾಯು ಪಡೆಗಳ ಮೂಲಕ ದಾಳಿ ಮಾಡಿ ಮರಿಯುಪೋಲ್ ಪ್ರದೇಶವನ್ನು ಸಹ ವಶಪಡಿಸಿಕೊಂಡಿತ್ತು.
ಇದನ್ನೂ ಓದಿ: ಸೈನ್ಯ, ನಗರಗಳ ಪುನರ್ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ