ಕೀವ್, ಉಕ್ರೇನ್: ಸೋಮವಾರ ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ನಡೆಸಿದ ದಾಳಿಯಿಂದಾಗಿ ಹಲವಾರು ಅಗತ್ಯ ಮೂಲ ಸೌಕರ್ಯಗಳಿಗೆ ಹಾನಿಯಾಗಿದ್ದು, ಅನೇಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೀವ್ ಮೇಯರ್ ವಿಟಾಲಿ ಕ್ಲಿಶ್ಕೊ ಹೇಳಿದ್ದಾರೆ. ಬಾಂಬ್ ದಾಳಿಯಿಂದ ಗಾಯಗೊಂಡಿರುವ ನೂರಾರು ಜನ ರಕ್ತಸಿಕ್ತವಾಗಿದ್ದು, ಕೀವ್ ರಸ್ತೆಗಳಲ್ಲಿ ಗಾಯಾಳುಗಳು ಒದ್ದಾಡುತ್ತಿರುವುದು ಕಂಡುಬಂದಿತು.
ಮೈಮೇಲೆಲ್ಲ ರಕ್ತ ಹರಿಯುತ್ತಿರುವ ಜನರನ್ನು ನೋಡಿದರೆ ಕೀವ್ನಲ್ಲಿ ಯುದ್ಧದ ಭೀಕರತೆ ಹೇಗಿದೆ ಎಂಬುದು ತಿಳಿಯುತ್ತದೆ. ಇಲ್ಲಿನ ದೃಶ್ಯಗಳು ಎಂಥವರಿಗೂ ಎದೆ ಝಲ್ ಎನಿಸುವಂತಿವೆ. ತಲೆ ಒಡೆದು ರಕ್ತ ಸೋರುತ್ತಿರುವ ಯುವಕನೊಬ್ಬನಿಗೆ ವೈದ್ಯನೊಬ್ಬ ಬ್ಯಾಂಡೇಜ್ ಸುತ್ತುತ್ತಿರುವುದು, ಮತ್ತೋರ್ವ ಮಹಿಳೆಯ ತಲೆಯಿಂದ ಒಂದೇ ಸಮನೆ ರಕ್ತ ಸುರಿಯುತ್ತಿರುವುದು, ಎಲ್ಲಿ ನೋಡಿದರೂ ಧ್ವಂಸಗೊಂಡಿರುವ ಕಾರುಗಳು.. ಇವೇ ದೃಶ್ಯಗಳು ಕೀವ್ನಲ್ಲಿ ಕಾಣಿಸುತ್ತಿವೆ.
ಸೇತುವೆ ಮೇಲೆ ದಾಳಿ ಮಾಡಿದ್ದು ಉಕ್ರೇನ್ನ ಭಯೋತ್ಪಾದಕ ಕೃತ್ಯ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಖಂಡಿಸಿದ್ದಾರೆ. ಯುದ್ಧದಿಂದ ಯಾವುದೇ ಲಾಭವಿಲ್ಲ ಎಂದು ಈ ಮಧ್ಯೆ ಭಾರತ ಹೇಳಿದೆ. ಪೂರ್ವ ಭಾಗದ ಪಟ್ಟಣ ಖಾರ್ಕಿವ್ ಮೇಲೆ ಇಂದು ಬೆಳಗ್ಗೆ ಹಲವಾರು ಸುತ್ತಿನ ಬಾಂಬ್ ದಾಳಿ ನಡೆದಿವೆ. ಇದರಿಂದ ಪಟ್ಟಣದಲ್ಲಿ ವಿದ್ಯುತ್ ಕಡಿತವಾಗಿದೆ.
ಇದನ್ನೂ ಓದಿ: ಇಂಧನ ಸಾಗಿಸುತ್ತಿದ್ದ ರೈಲಿಗೆ ಬೆಂಕಿ.. ಕ್ರಿಮಿಯಾ ರಷ್ಯಾದ ಪ್ರಮುಖ ಸೇತುವೆಗೆ ಹಾನಿ, ಉಕ್ರೇನ್ ಅಚ್ಚರಿ ಹೇಳಿಕೆ