ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಸ್ಥಾನ ಪಡೆಯಲು ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ರಷ್ಯಾ ಸೋಮವಾರ ಹೇಳಿದೆ. ಭಾರತದ ಹಕ್ಕನ್ನು ರಷ್ಯಾ ಅನುಮೋದಿಸುತ್ತದೆ. ಈ ಬಗ್ಗೆ ಉಭಯ ರಾಷ್ಟ್ರಗಳು ಚರ್ಚಿಸಿವೆ ಎಂದು ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾರತದಲ್ಲಿರುವ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬೇರೆ ರಾಷ್ಟ್ರಗಳು ಸ್ಥಾನ ಪಡೆಯುವುದು ಸಮಂಜಸವಾಗಿದೆ. ಅದರಲ್ಲೂ ಭಾರತಕ್ಕೆ, ರಷ್ಯಾ ಪೂರ್ಣ ಬೆಂಬಲ ನೀಡಲಿದೆ. ಡಿಸೆಂಬರ್‌ನಲ್ಲಿ ಎರಡೂ ದೇಶಗಳ ವಿದೇಶಾಂಗ ಸಚಿವರ ನಡುವೆ ಈ ವಿಷಯದ ಬಗ್ಗೆ ಗಹನವಾಗಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು.
ಭಾರತಕ್ಕಿದು ಸಕಾಲ: ಭದ್ರತಾ ಮಂಡಳಿಗಳ ಮುಖ್ಯಸ್ಥರು, ವಿದೇಶಾಂಗ ಮಂತ್ರಿಗಳು ಕಳೆದ ವರ್ಷ 7 ಬಾರಿ ಭೇಟಿಯಾಗಿದ್ದಾರೆ. ಸಭೆಗಳಲ್ಲಿ ಮಂಡಳಿ ಸದಸ್ಯತ್ವ ನವೀಕರಣದ ಬಗ್ಗೆ ಚರ್ಚೆಗಳು ನಡೆದಿವೆ. ಮಂಡಳಿಯಲ್ಲಿ ಭಾರತ ಸದಸ್ಯತ್ವ ಪಡೆಯುವುದು ಸಕಾಲವಾಗಿದೆ. ಇದಕ್ಕೆ ರಷ್ಯಾ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.
ಇತ್ತೀಚೆಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು 5 ದಿನಗಳ ರಷ್ಯಾ ಪ್ರವಾಸ ಕೈಗೊಂಡಿದ್ದರು. ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ, ಜಾಗತಿಕ ಸಮಸ್ಯೆಗಳಾದ ಇಂಡೋ-ಪೆಸಿಫಿಕ್, ಉಕ್ರೇನ್ ಸಂಘರ್ಷ ಮತ್ತು ಗಾಜಾ ಕುರಿತು ವ್ಯಾಪಕ ಚರ್ಚೆ ನಡೆಸಿದ್ದರು.
ಅರ್ಹ ದೇಶ ಎಂದಿದ್ದ ಪುಟಿನ್: ಇದಕ್ಕೂ ಮೊದಲು ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಸಿಗಬೇಕು. ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಂತಹ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಹೆಚ್ಚಿನ ಪ್ರಾತಿನಿಧ್ಯ ಪಡೆಯಲು ಅರ್ಹವಾಗಿವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದರು.
ವಿಶ್ವಸಂಸ್ಥೆಯಲ್ಲಿ ತುರ್ತಾಗಿ ಸುಧಾರಣೆಗಳನ್ನು ತರಬೇಕಿದೆ. ಭಾರತದಂತಹ "ಶಕ್ತಿಶಾಲಿ ದೇಶ" ಭದ್ರತಾ ಮಂಡಳಿಯಲ್ಲಿ ಇರಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಹೆಚ್ಚು ಬಲಿಷ್ಠವಾಗಿ ಬೆಳೆಯುತ್ತಿದೆ ಎಂದೆಲ್ಲಾ ಗುಣಗಾನ ಮಾಡಿದ್ದರು.
ಪ್ರಧಾನಿ ಮೋದಿ ಅವರನ್ನು ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದು ಬಣ್ಣಿಸಿದ್ದಲ್ಲದೆ, ಅವರ ನಾಯಕತ್ವದಲ್ಲಿ ಭಾರತವು ಅಭಿವೃದ್ಧಿಯೊಂದಿಗೆ ಹೆಚ್ಚಿನ ಪ್ರಗತಿ ಸಾಧಿಸುತ್ತಿದೆ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಮೂಲಕ ಮೋದಿ ಸರಿಯಾದ ದೆಸೆಯತ್ತ ದೇಶವನ್ನು ಸಾಗಿಸುತ್ತಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಬಿಲ್ಕಿಸ್ ಬಾನೊ ಅವಿರತ ಹೋರಾಟ ಸೊಕ್ಕಿನ ಬಿಜೆಪಿ ಸರ್ಕಾರದ ವಿರುದ್ಧ ನ್ಯಾಯಕ್ಕೆ ಸಂದಿರುವ ಜಯ : ರಾಹುಲ್ ಗಾಂಧಿ