ಲಂಡನ್: ತನ್ನನ್ನು ಬೆಂಬಲಿಸಿದ್ದಕ್ಕಾಗಿ ಪಾಲಕರು ಮತ್ತು ಪತ್ನಿ ಅಕ್ಷತಾ ಮೂರ್ತಿ ಅವರನ್ನು ಅಭಿನಂದಿಸಿ, ವೈಯಕ್ತಿಕ ಭಾವನಾತ್ಮಕ ಸಂದೇಶ ರವಾನಿಸುವ ಮೂಲಕ ನೂತನ ಕನ್ಸರ್ವೇಟಿವ್ ಪಾರ್ಟಿ ಅಧ್ಯಕ್ಷ ಸ್ಥಾನದ ಮತ್ತು ಬ್ರಿಟನ್ ಪ್ರಧಾನಿ ಹುದ್ದೆಯ ಅಭ್ಯರ್ಥಿ ರಿಷಿ ಸುನಕ್ ತಮ್ಮ ಚುನಾವಣಾ ಪ್ರಚಾರವನ್ನು ಕೊನೆಗೊಳಿಸಿದ್ದಾರೆ. ಲಂಡನ್ನ ವೆಂಬ್ಲೆಯಲ್ಲಿ ನಡೆದ ಪ್ರಚಾರ ಸಮಾರಂಭದಲ್ಲಿ ಸುನಕ್ ರಾಕ್ ಸ್ಟಾರ್ ತರಹ ಕಾಣಿಸಿದ್ದು ವಿಶೇಷವಾಗಿತ್ತು. ಅವರ ಅಭಿಮಾನಿಗಳು ರಿಷಿ ರಿಷಿ ಎಂದು ಘೋಷಣೆ ಹಾಕುತ್ತಿದ್ದರು.
ತನಗೆ ಹಾಗೂ ತನ್ನ ಪ್ರತಿಸ್ಪರ್ಧಿ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರಿಗೆ ಸಿಕ್ಕ ಸ್ವಾಗತದ ಮಧ್ಯದ ಭಾರಿ ಅಂತರವಿದ್ದರೂ, ಅಲ್ಲಿ ನೆರೆದ ಜನರಿಗೆ ಮಾತ್ರ ಸುನಕ್ ಗೆಲುವಿನ ಅಭ್ಯರ್ಥಿಯಾಗಿದ್ದರು.
ಈ ಅಂತಿಮ ಪ್ರಚಾರ ಸಮಾರಂಭ ನನಗೆ ವಿಶೇಷವಾಗಿದೆ. ಏಕೆಂದರೆ ಸಾರ್ವಜನಿಕ ಸೇವೆಗೆ ಪ್ರವೇಶಿಸಲು ನನ್ನನ್ನು ಪ್ರೇರೇಪಿಸಿದ ಇಬ್ಬರು ವ್ಯಕ್ತಿಗಳು ಇಂದು ರಾತ್ರಿ ಇಲ್ಲಿದ್ದಾರೆ. ಅವರೇ- ನನ್ನ ತಾಯಿ ಮತ್ತು ತಂದೆ ಎಂದು ಸುನಕ್ ಅಭಿಪ್ರಾಯ ವ್ಯಕ್ತಪಡಿಸಿದರು. ಸುನಕ್ ಈ ಮಾತು ಹೇಳುತ್ತಿದ್ದಂತೆಯೇ ಕ್ಯಾಮರಾಗಳು ಅವರ ತಂದೆ, ವೈದ್ಯರಾಗಿರುವ ಯಶ್ವೀರ್ ಮತ್ತು ಫಾರ್ಮಸಿಸ್ಟ್ ಆಗಿರುವ ತಾಯಿ ಉಷಾ ಅವರ ಮೇಲೆ ಗಮನ ಕೇಂದ್ರೀಕರಿಸಿದವು. ಸುನಕ್ ಪತ್ನಿ ಅಕ್ಷತಾ ಕೂಡ ಇವರ ಜೊತೆ ಕುಳಿತಿದ್ದರು.
ನನ್ನ ತಂದೆ-ತಾಯಿ ಜನರಿಗಾಗಿ ಮಾಡಿದ ಸೇವೆಯ ಮಾದರಿಯು ನನಗೆ ಪ್ರೇರಣೆಯಾಗಿದೆ. ನೀವು ಹೊಂದಿದ್ದಕ್ಕಿಂತಲೂ ಉತ್ತಮ ಜೀವನವನ್ನು ನಿಮ್ಮ ಮಕ್ಕಳಿಗೆ ನೀಡಬೇಕೆಂದು ನೀವು ಮಾಡಿದ ತ್ಯಾಗ ಮತ್ತು ಪ್ರಯತ್ನಗಳಿಗೆ ಧನ್ಯವಾದಗಳು ಅಪ್ಪ ಮತ್ತು ಅಮ್ಮ. ಕಠಿಣ ಪರಿಶ್ರಮ, ನಂಬಿಕೆ ಮತ್ತು ಕುಟುಂಬದ ಪ್ರೀತಿಯೊಂದಿಗೆ ಈ ದೇಶದಲ್ಲಿ ಯಾರು ಬೇಕಾದರೂ ಉನ್ನತವಾದುದನ್ನು ಸಾಧಿಸಬಹುದೆಂಬುದನ್ನು ನನಗೆ ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಎಂದು ಸುನಕ್ ಹೇಳುತ್ತಿದ್ದಂತೆಯೇ ಜನತೆ ಕರತಾಡನಗೈದರು.