ಸಿಡ್ನಿ (ಆಸ್ಟ್ರೇಲಿಯಾ) : ವಯಸ್ಸು 60 ದಾಟಿದರೂ ಕೆಲವರಿಗೆ ಕೆಲಸದಿಂದ ನಿವೃತ್ತಿ ಪಡೆಯಲಾಗುವುದಿಲ್ಲ. ಆದರೆ ಇಲ್ಲೊಬ್ಬಳು 11 ವರ್ಷದ ಪುಟ್ಟ ಪೋರಿ ಈಗಾಗಲೇ ಸಾಕಷ್ಟು ಕೆಲಸ ಮಾಡಿ ರಿಟೈರ್ಮೆಂಟ್ ಪಡೆಯುತ್ತಿದ್ದಾಳೆ. ಅಷ್ಟೇ ಅಲ್ಲ ಅದಕ್ಕಾಗಿ ರಿಟೈರ್ಮೆಂಟ್ ಪಾರ್ಟಿಯನ್ನೂ ಏರ್ಪಡಿಸಿದ್ದಾಳೆ. 12ನೇ ವಯಸ್ಸಿಗೆ ಕೆಲಸದಿಂದ ರಿಟೈರ್ ಆಗಲಿರುವ ಈ ಬಾಲೆ ಇನ್ನು ಶಾಲೆಗೆ ಹೋಗಲಿದ್ದಾಳೆ.
ಈಕೆಯ ಹೆಸರು ಪಿಕ್ಸೀ ಕರ್ಟಿಸ್. ಈಕೆ ಆಸ್ಟ್ರೇಲಿಯಾದಲ್ಲಿ ಯುವ ಉದ್ಯಮಿಯಾಗಿದ್ದಾಳೆ. ಪಿಕ್ಸೀ ಫಿಡ್ಜೆಟ್ಸ್ (Pixie's Fidgets) ಎಂಬ ತನ್ನ ಆಟಿಕೆಗಳ ಕಂಪನಿಯ CEO ಆಗಿದ್ದಾಳೆ. 2021 ರಲ್ಲಿ ತಮ್ಮ ತಾಯಿ ರಾಕ್ಸಿ ಜಾಸೆಂಕೊ ಅವರೊಂದಿಗೆ ಸೇರಿ ಕಂಪನಿ ಸ್ಥಾಪಿಸಿ ಸಾಕಷ್ಟು ಲಾಭವನ್ನೂ ಗಳಿಸಿದ್ದಾಳೆ. ವರದಿಗಳ ಪ್ರಕಾರ, ಬಾಲ ಮಿಲಿಯನೇರ್ ಪಿಕ್ಸೀ ಪ್ರಸ್ತುತ ಪ್ರತಿ ತಿಂಗಳು $1,33,000 ಕ್ಕಿಂತ ಹೆಚ್ಚು ಆದಾಯ ಗಳಿಸುತ್ತಾಳೆ.
ಸದ್ಯ ಪಿಕ್ಸೀ ಅವಳ ತಾಯಿ ಜಾಸೆಂಕೊ ಮಗಳಿಗೆ ಇನ್ನು ರಿಟೈರ್ಮೆಂಟ್ ಪಡೆಯುವಂತೆ ಸಲಹೆ ನೀಡಿದ್ದು, ಈ ವಯಸ್ಸಿನಲ್ಲಿ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಿ ಹೇಳಿದ್ದಾರೆ. ಅದರಂತೆ ಮಗಳು ಈಗ ಮಿಲಿಯನೇರ್ ಆಗಿ ರೀಟರ್ಮೆಂಟ್ ಪಾರ್ಟಿ ಏರ್ಪಡಿಸಿದ್ದಾರೆ. ಕರ್ಟಿಸ್ ಈಗ ಶಾಲೆಯತ್ತ ಗಮನಹರಿಸಲು ತನ್ನ ವ್ಯವಹಾರದಿಂದ ದೂರ ಸರಿಯುತ್ತಿದ್ದಾಳೆ.
"ಸಂಕ್ಷಿಪ್ತವಾಗಿ ಹೇಳುವುದಾದರೆ, ಕಳೆದ ಕೆಲವು ತಿಂಗಳುಗಳಿಂದ ನಾವು ಕುಟುಂಬವಾಗಿ ವ್ಯಾಪಾರ ವಹಿವಾಟು ಮುನ್ನಡೆಸುವ ಬಗ್ಗೆ ಚರ್ಚಿಸುತ್ತಿದ್ದೇವೆ. ಮೂರು ವರ್ಷಗಳ ಹಿಂದೆ ಆರಂಭವಾದ ಇದು ಅದ್ಭುತವಾಗಿದ್ದರೂ ಮಗಳು ಪ್ರೌಢಶಾಲೆಯತ್ತ ಗಮನಹರಿಸುವುದು ಮುಖ್ಯವಾಗಿದೆ ಎಂದು ನಿರ್ಧರಿಸಿದ್ದೇವೆ." ಎಂದು ತಾಯಿ ಜಾಸೆಂಕೊ ಹೇಳಿದ್ದಾರೆ.
ಇನ್ಸ್ಟಾನಲ್ಲಿ ವೀಡಿಯೊ ಒಂದನ್ನು ಶೇರ್ ಮಾಡಿರುವ ಕರ್ಟಿಸ್, ತನ್ನ ಪಾರ್ಟಿಗೆ ಆಗಮಿಸಲಿರುವ ಅತಿಥಿಗಳಿಗೆ ಉಡುಗೊರೆಯಾಗಿ ನೀಡಲು ಪ್ಯಾಕ್ ಮಾಡಲಾಗಿರುವ 50 ಡಾಲರ್ಗಿಂತ ಹೆಚ್ಚು ಮೌಲ್ಯದ ಬ್ಯೂಟಿ ಕೇರ್ ಉತ್ಪನ್ನಗಳು ಮತ್ತು ಗ್ಲೋ ಲಿಪ್ ಟ್ರೀಟ್‌ಮೆಂಟ್ ವಸ್ತುಗಳು ಮತ್ತು ಬ್ಯಾಗ್ಗಳನ್ನು ಪ್ರದರ್ಶಿಸಿದ್ದಾಳೆ.
ಉಡುಗೊರೆಗಳನ್ನು ಐಷಾರಾಮಿ ಆಸ್ಟ್ರೇಲಿಯನ್ ಬ್ಯೂಟಿ ಬ್ರ್ಯಾಂಡ್ MCoBeauty ಪ್ರಾಯೋಜಿಸಿದೆ. ಕರ್ಟಿಸ್ ಪೋಸ್ಟ್ ಮಾಡಿದ ವೀಡಿಯೊಗೆ ಹಲವಾರು ಫಾಲೋವರ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ಕರ್ಟಿಸ್ ಆಗಾಗ್ಗೆ ತನ್ನ ದುಬಾರಿ ಜೀವನಶೈಲಿಯ ಚಿತ್ರಗಳನ್ನು ಇನ್ಸ್ಟಾನಲ್ಲಿ ಹಂಚಿಕೊಳ್ಳುತ್ತಿರುತ್ತಾಳೆ. ಇನ್ಸ್ಟಾದಲ್ಲಿ ಈಕೆಗೆ 1,30,000 ಫಾಲೋವರ್ಸ್ ಇದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟೊಂದು ದುಬಾರಿ ಜೀವನಶೈಲಿ ಬೇಕಾ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಕರ್ಟಿಸ್ ಮರ್ಸಿಡಿಸ್ ಬೆಂಜ್ ಕಾರಿನ ಒಡತಿಯಾಗಿದ್ದಾಳೆ. ಆದರೂ ಆಕೆ ಕಾನೂನುಬದ್ಧವಾಗಿ ಈಗಲೇ ಕಾರು ಓಡಿಸಲು ಸಾಧ್ಯವಿಲ್ಲ. 10ನೇ ಹುಟ್ಟುಹಬ್ಬದಂದು ಆಕೆಯ ತಾಯಿ ಅವಳಿಗೆ ಕಾರು ಉಡುಗೊರೆ ನೀಡಿದ್ದಾರೆ. ಕರ್ಟಿಸ್ ಕಂಪನಿಯಿಂದ ರಿಟೈರ್ ಆದರೂ Pixie's Pix ಆನ್ಲಯಬ್ ಸ್ಟೋರ್ ಎಂದಿನಂತೆ ಮುಂದುವರಿಯಲಿದೆ. ಸದ್ಯ ಇದನ್ನು ಆಕೆಯ ತಾಯಿ ಮುನ್ನಡೆಸಲಿದ್ದಾರೆ.
ಇದನ್ನೂ ಓದಿ : Project Tiger: ತಮಿಳುನಾಡಿನ ಕಾಡುಗಳಲ್ಲಿರುವ ಹುಲಿಗಳ ಸಂಖ್ಯೆ 306; 16 ವರ್ಷಗಳಲ್ಲಿ ಸಂತತಿ 4 ಪಟ್ಟು ಹೆಚ್ಚಳ