ಇಸ್ಲಾಮಾಬಾದ್ (ಪಾಕಿಸ್ತಾನ) : ತಮ್ಮ ಸಹೋದರ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಮುಂದಿನ ತಿಂಗಳು ದೇಶಕ್ಕೆ ಮರಳಲಿದ್ದಾರೆ ಎಂದು ನಿರ್ಗಮಿತ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾರೆ. ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳಲ್ಲಿ ವಿಚಾರಣೆ ಎದುರಿಸಲು ಮತ್ತು ಮುಂದಿನ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಮುನ್ನಡೆಸಲು ಶರೀಫ್ ಬರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
2018 ರಲ್ಲಿ ಅಲ್-ಅಜೀಜಿಯಾ ಮಿಲ್ಸ್ ಮತ್ತು ಅವೆನ್ ಫೀಲ್ಡ್ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ನಂತರ ನವಾಜ್ ಶರೀಫ್ 2019 ರ ನವೆಂಬರ್ನಿಂದ ಸ್ವಯಂ ನಿರ್ಬಂಧಿತ ದೇಶಭ್ರಷ್ಟರಾಗಿ ಇಂಗ್ಲೆಂಡ್ನಲ್ಲಿ ವಾಸಿಸುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್ಗೆ ತೆರಳುವ ಮುನ್ನ ಅವರು ಅಲ್-ಅಜೀಜಿಯಾ ಮಿಲ್ಸ್ ಪ್ರಕರಣದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಗೊಳಗಾಗಿ ಲಾಹೋರ್ನ ಕೋಟ್ ಲಖ್ಪತ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.
ಟೆಲಿವಿಷನ್ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ಗಮಿತ ಪ್ರಧಾನಿ ಶೆಹಬಾಜ್ ಶರೀಫ್, ದೇಶದಲ್ಲಿ ಉಸ್ತುವಾರಿ ಸರ್ಕಾರ ಅಧಿಕಾರ ವಹಿಸಿಕೊಂಡ ಕೂಡಲೇ ನವಾಜ್ ಶರೀಫ್ ಅವರನ್ನು ಭೇಟಿ ಮಾಡಲು ತಾವು ಲಂಡನ್ ಗೆ ಪ್ರಯಾಣಿಸುವುದಾಗಿ ಹೇಳಿದರು. ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಗೆದ್ದರೆ ನವಾಜ್ ಶರೀಫ್ ನಾಲ್ಕನೇ ಬಾರಿಗೆ ಪಾಕಿಸ್ತಾನದ ಪ್ರಧಾನಿಯಾಗಲಿದ್ದಾರೆ ಎಂದು ಶೆಹಬಾಜ್ ಪುನರುಚ್ಚರಿಸಿದರು.
ನಿಗದಿತ ಅವಧಿಗಿಂತ ಮೂರು ದಿನ ಮುಂಚಿತವಾಗಿ ಬುಧವಾರ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಲಾಗಿದ್ದು, ಹಂಗಾಮಿ ಆಡಳಿತ ವ್ಯವಸ್ಥೆಯನ್ನು ನೇಮಿಸುವ ಪ್ರಕ್ರಿಯೆ ಔಪಚಾರಿಕವಾಗಿ ಆರಂಭವಾಗಿದೆ. ಈ ಮಧ್ಯೆ ನವಾಜ್ ಬಗ್ಗೆ ಶಹಬಾಜ್ ಮಾತನಾಡಿರುವುದು ಗಮನಾರ್ಹ. "ನವಾಜ್ ಶರೀಫ್ ಮುಂದಿನ ತಿಂಗಳು ಪಾಕಿಸ್ತಾನಕ್ಕೆ ವಾಪಸ್ ಆಗಲಿದ್ದಾರೆ ಮತ್ತು ಕೋರ್ಟ್ಗೆ ಹಾಜರಾಗಲಿದ್ದಾರೆ" ಎಂದು ಶಹಬಾಜ್ ಹೇಳಿದ್ದಾರೆ. ಆದಾಗ್ಯೂ ತಮ್ಮ ಸಹೋದರ ನಿಖರವಾಗಿ ಯಾವ ದಿನಾಂಕದಂದು ಪಾಕಿಸ್ತಾನಕ್ಕೆ ಬರಲಿದ್ದಾರೆ ಎಂಬುದನ್ನು ಅವರು ಹೇಳಿಲ್ಲ.
2016ರಲ್ಲಿ ಪಾಕಿಸ್ತಾನ ಸುಪ್ರೀಂ ಕೋರ್ಟ್ನಿಂದ ಜೀವಾವಧಿ ಶಿಕ್ಷೆಗೊಳಗಾದ ನಂತರ ನವಾಜ್ ಶರೀಫ್ ಪ್ರಧಾನಿ ಹುದ್ದೆಯಿಂದ ಕೆಳಗಿಳಿದಿದ್ದರು. ಶಿಕ್ಷೆಯ ವಿರುದ್ಧ ಅವರು ಸಲ್ಲಿಸಿದ ಮೇಲ್ಮನವಿಗಳು ಸಂಬಂಧಿತ ನ್ಯಾಯಾಲಯಗಳಲ್ಲಿ ಇನ್ನೂ ಬಾಕಿ ಉಳಿದಿವೆ.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲಲಿದೆ ಮತ್ತು ನವಾಜ್ ಶರೀಫ್ ನೇತೃತ್ವದ ಸರ್ಕಾರದ ಅಡಿ ತಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡಲಿದ್ದೇನೆ ಎಂದು ಪಿಎಂಎಲ್ಎನ್ ಅಧ್ಯಕ್ಷರೂ ಆಗಿರುವ ಶೆಹಬಾಜ್ ಶರೀಫ್ ಪುನರುಚ್ಛರಿಸಿದ್ದಾರೆ. ಹಂಗಾಮಿ ಪ್ರಧಾನಿ ನೇಮಕಕ್ಕೆ ಸಂಬಂಧಿಸಿದಂತೆ ಸಹೋದರ ನವಾಜ್ ಶರೀಫ್ ಅವರೊಂದಿಗೆ ಸಮಾಲೋಚಿಸುವುದಾಗಿ ಅವರು ತಿಳಿಸಿದ್ದಾರೆ.
ಪ್ರಸ್ತುತ ಮತ್ತೋರ್ವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ಭ್ರಷ್ಟಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಜೈಲು ಶಿಕ್ಷೆ ಅನುಭವಿಸುತ್ತಿರುವುದು ಗಮನಾರ್ಹ. 2018 ರಿಂದ 2022 ರವರೆಗೆ ಪ್ರಧಾನಿಯಾಗಿದ್ದ ಅವಧಿಯಲ್ಲಿ ಸರ್ಕಾರಿ ಉಡುಗೊರೆಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಇಸ್ಲಾಮಾಬಾದ್ ವಿಚಾರಣಾ ನ್ಯಾಯಾಲಯ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಇದನ್ನೂ ಓದಿ : Pakistan Politics: ಕೀಟ ತುಂಬಿದ ಬೆಳಕಿಲ್ಲದ ಜೈಲು ಸೆಲ್ನಲ್ಲಿ ಇಮ್ರಾನ್; ಪಾಕ್ ಮಾಜಿ ಪ್ರಧಾನಿಗೆ ದುರ್ಗತಿ