ಇಸ್ಲಾಮಾಬಾದ್: ಭಾರತದ ವಿರುದ್ಧ ಪಿತೂರಿ ಮಾಡುತ್ತಲೇ ಇರುವ ಪಾಕಿಸ್ತಾನ ಇದೀಗ ಶಾಂತಿ ಮಾತನ್ನಾಡುತ್ತಿದೆ. ಭಾರತದೊಂದಿಗೆ ಶಾಶ್ವತ ಶಾಂತಿ ಕಾಪಾಡಲು ದೇಶ ಬಯಸುತ್ತದೆ. ಕಾಶ್ಮೀರ ವಿಚಾರದಲ್ಲಿ ಉಭಯ ದೇಶಗಳಿಗೆ ಯುದ್ಧ ಮೊದಲ ಅಸ್ತ್ರವಲ್ಲ ಎಂದು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಹೇಳಿದ್ದಾರೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ನಿಯೋಗ ಉದ್ದೇಶಿಸಿ ಮಾತನಾಡಿದ ಷರೀಫ್, ಈ ಪ್ರದೇಶದಲ್ಲಿ ಸುಸ್ಥಿರ ಶಾಂತಿ ನೆಲೆಸಿದಲ್ಲಿ ಕಾಶ್ಮೀರ ಸಮಸ್ಯೆ ಪರಿಹಾರ ಸಾಧ್ಯವಾಗಲಿದೆ. ಈ ಕುರಿತು ವಿಶ್ವಸಂಸ್ಥೆಯ ನಿರ್ಣಯಗಳನ್ನೂ ಜಾರಿ ಮಾಡಲು ಸುಲಭ ಸಾಧ್ಯ. ಯುದ್ಧ ಉಭಯ ರಾಷ್ಟ್ರಗಳಿಗೂ ಆಯ್ಕೆಯಾಗಿಲ್ಲ. ಇದರಿಂದಾಗಿ ಕಾಶ್ಮೀರ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಲಾಗುವುದು ಎಂದು ಹೇಳಿದರು.
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಎರಡೂ ದೇಶಗಳ ನಡುವಿನ ಸಂಬಂಧಗಳು ಆಗಾಗ್ಗೆ ಹದಗೆಡುತ್ತಿದೆ. ಇದರ ಹೊರತಾಗಿಯೂ ವ್ಯಾಪಾರ, ವಹಿವಾಟು, ಆರ್ಥಿಕತೆಯಲ್ಲಿ ಸ್ಪರ್ಧೆ ಮೂಲಕ ಜನರ ಸ್ಥಿತಿಯನ್ನು ಸುಧಾರಿಸಬೇಕಿದೆ ಎಂದು ಇದೇ ವೇಳೆ ಅಭಿಪ್ರಾಯಪಟ್ಟರು.
ಪಾಕಿಸ್ತಾನ ಆಕ್ರಮಣಕಾರಿ ಅಲ್ಲ: ನಮ್ಮಲ್ಲಿರುವ ಅಣ್ವಸ್ತ್ರಗಳು ಇನ್ನೊಂದು ದೇಶದ ಮೇಲೆ ಪ್ರಯೋಗ ಮಾಡಲು ಅಲ್ಲ. ಅವುಗಳು ಮತ್ತು ನಮ್ಮ ಸೈನಿಕರು ಇರುವುದು ರಾಷ್ಟ್ರ ರಕ್ಷಣೆಗಾಗಿ. ಸೇನೆಗೆ ಖರ್ಚು ಮಾಡುವ ವೆಚ್ಚ ದೇಶದ ಗಡಿಯನ್ನು ಕಾಪಾಡಿಕೊಳ್ಳಲು ಮಾತ್ರ. ಪಾಕಿಸ್ತಾನ ಎಂದಿಗೂ ಆಕ್ರಮಣಕಾರಿ ದೇಶವಲ್ಲ ಎಂದರು.
ಕೆಲ ದಿನಗಳ ಹಿಂದೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾರತದ ಗುಣಗಾನ ಮಾಡಿದ್ದರು. ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಎಂದರೆ ಏನು ಎಂದು ಉದಾಹರಣೆ ನೀಡುವಾಗ ಕೇಂದ್ರ ಸಚಿವ ಎಸ್. ಜೈಶಂಕರ್ ವಿಡಿಯೋ ಪ್ರದರ್ಶಿಸಿದ್ದರು.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಶಾಲಾ ದಾಖಲಾತಿ ದರ 2 ವರ್ಷದಲ್ಲಿ ಶೇ.14.5 ರಷ್ಟು ಹೆಚ್ಚಳ