ಇಸ್ಲಾಮಾಬಾದ್, ಪಾಕಿಸ್ತಾನ : ನೆರೆಯ ಶ್ರೀಲಂಕಾದಲ್ಲಿ ಇದ್ದಂತೆ ಪಾಕಿಸ್ತಾನದಲ್ಲೂ ವಿದ್ಯುತ್ ಕೊರತೆ ಕಾಣಿಸಿಕೊಳ್ಳುತ್ತಿದೆ. ಒಂದು ದಿನಕ್ಕೆ 21,500 ಮೆಗಾವ್ಯಾಟ್ನಷ್ಟು ವಿದ್ಯುತ್ ಬೇಡಿಕೆ ಇದ್ದು, ಕೇವಲ 15,500 ಮೆಗಾವ್ಯಾಟ್ ವಿದ್ಯುತ್ ಅನ್ನು ಉತ್ಪಾದನೆ ಮಾಡಲು ಸಾಧ್ಯವಾಗುತ್ತಿದೆ. 6000 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ವಿದ್ಯುತ್ ಉತ್ಪಾದನೆ ಕಡಿಮೆಯಾಗಲು ಇಂಧನ ಕೊರತೆ ಮತ್ತು ತಾಂತ್ರಿಕ ಸಮಸ್ಯೆಗಳು ಕಾರಣ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಇಂಧನ ಸಚಿವಾಲಯದ ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿ ಒಟ್ಟು 33,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದೆ. ಆದರೆ, ಅಲ್ಲಿನ ಸರ್ಕಾರದ ಜಲವಿದ್ಯುತ್ ಸ್ಥಾವರಗಳು 1,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿದರೆ, ಖಾಸಗಿ ವಲಯದ ವಿದ್ಯುತ್ ಸ್ಥಾವರಗಳು 12,000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತವೆ. ಉಷ್ಣ ವಿದ್ಯುತ್ ಸ್ಥಾವರಗಳು 2,500 ಮೆಗಾವ್ಯಾಟ್ ಉತ್ಪಾದಿಸುತ್ತವೆ. ಇದರಿಂದ ಭಾರಿ ಪ್ರಮಾಣದಲ್ಲಿ ವಿದ್ಯುತ್ ಕೊರತೆ ಕಂಡು ಬರುತ್ತಿದ್ದು, ಒಂದು ದಿನಕ್ಕೆ 10 ಬಿಲಿಯನ್ ರೂಪಾಯಿ ನಷ್ಟವಾಗುತ್ತಿದೆ.
ಇಂಧನದ ಕೊರತೆ ಮತ್ತು ಇತರ ತಾಂತ್ರಿಕ ದೋಷಗಳಿಂದಾಗಿ ಪಾಕಿಸ್ತಾನದಲ್ಲಿ ಹಲವಾರು ವಿದ್ಯುತ್ ಸ್ಥಾವರಗಳನ್ನು ಮುಚ್ಚಲಾಗಿದೆ. ಇದರ ಪರಿಣಾಮವಾಗಿ ಪ್ರತಿದಿನ 10 ಗಂಟೆಗಳವರೆಗೆ ವಿದ್ಯುತ್ ಸ್ಥಗಿತಗೊಳ್ಳುತ್ತದೆ. ವಿದ್ಯುತ್ ಸ್ಥಾವರಗಳನ್ನು ದುರಸ್ತಿ ಮಾಡಲು ಮತ್ತು ತೈಲವನ್ನು ಖರೀದಿಸಲು ಸಾಕಷ್ಟು ಹಣವನ್ನು ಸರಬರಾಜು ಮಾಡದ ಕೇಂದ್ರೀಯ ವಿದ್ಯುತ್ ಖರೀದಿ ಏಜೆನ್ಸಿ-ಗ್ಯಾರೆಂಟಿ (CPPA-G) ವಿರುದ್ಧ ಕೆಲವು ವಿದ್ಯುತ್ ಸ್ಥಾವರಗಳ ಮುಖ್ಯಸ್ಥರು ದೂರುಗಳನ್ನು ನೀಡಿದ್ದಾರೆ.
ಈ ದೂರುಗಳನ್ನು ಪರಿಶೀಲಿಸಿದ ರಾಷ್ಟ್ರೀಯ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರವು ಕೇಂದ್ರೀಯ ವಿದ್ಯುತ್ ಖರೀದಿ ಏಜೆನ್ಸಿ-ಗ್ಯಾರೆಂಟಿ (CPPA-G) ಸಂಸ್ಥೆಗೆ ಶೀಘ್ರವೇ ವಿದ್ಯುತ್ ಸ್ಥಾವರಗಳಿಗೆ ಹಣ ಬಿಡುಗಡೆ ಮಾಡುವಂತೆ ಆದೇಶ ನೀಡಿದೆ. ಈ ಮೂಲಕ ಕೆಲವೇ ದಿನಗಳಲ್ಲಿ ವಿದ್ಯುತ್ ಕೊರತೆಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಮುಂದುವರಿದ ರಷ್ಯಾ ಅಟ್ಟಹಾಸ.. ಕೀವ್ನಲ್ಲಿ 900ಕ್ಕೂ ಅಧಿಕ ನಾಗರಿಕರ ಮೃತದೇಹಗಳು ಪತ್ತೆ